ಬೆಂಗಳೂರು: ನಿರೀಕ್ಷೆಯಂತೆ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಇಂದು ಬೆಂಗಳೂರು ನಗರದಲ್ಲಿ ನಡೆಸಬೇಕಾದ ಪ್ರಚಾರದಿಂದ ದೂರ ಉಳಿದಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಕಟಣೆ ಪ್ರಕಾರ ಇಂದು ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಬೆಂಗಳೂರಿನ ಮಹಾಲಕ್ಷ್ಮಿಲೇಔಟ್ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರಕಾರ್ಯ ನಡೆಸಬೇಕಿತ್ತು.
ಆದ್ರೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಆಪ್ತ ವಲಯದಲ್ಲಿ ಬರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮತ್ತಿತರ ನಾಯಕರಿಂದ ಸಮಾನ ಅಂತರ ಕಾಯ್ದುಕೊಂಡಿರುವ ಪರಮೇಶ್ವರ್, ನಗರದಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದರೆ, ದಿನೇಶ್ ಗುಂಡೂರಾವ್ ಮಹಾಲಕ್ಷ್ಮಿ ಲೇಔಟ್ ನಲ್ಲಿ ವೇದಿಕೆ ಹಂಚಿಕೊಳ್ಳಬೇಕಿತ್ತು. ಅದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ನಿಗದಿತ ಕಾರ್ಯಕ್ರಮ ಪಟ್ಟಿಯನ್ನು ಹೊರತುಪಡಿಸಿ ಮೈಸೂರಿನ ಹುಣಸೂರಿಗೆ ತೆರಳಿ ಕೈ ಅಭ್ಯರ್ಥಿ ಪರ ಪ್ರಚಾರ ನಡೆಸಿ ವಾಪಸಾಗಿದ್ದಾರೆ.
ದಿನೇಶ್ ಗೆ ಮಾಹಿತಿ ಇಲ್ಲ:
ಒಂದೆಡೆ ಪರಮೇಶ್ವರ್ ಹುಣಸೂರಿನಲ್ಲಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದರೆ, ಇನ್ನೊಂದೆಡೆ ಈ ಬಗ್ಗೆ ಮಾಹಿತಿ ಇರದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಹಾಲಕ್ಷ್ಮಿಲೇಔಟ್ ನಲ್ಲಿ ನಡೆಸಿದ ಪ್ರಚಾರ ಭಾಷಣದ ಸಂದರ್ಭದಲ್ಲಿ ಅನಾರೋಗ್ಯದ ಹಿನ್ನೆಲೆ ಪರಮೇಶ್ವರ್ ಪ್ರಚಾರಕ್ಕೆ ಬಂದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿಯೇ ಮೂಲ ಹಾಗೂ ವಲಸೆ ಭೇದ-ಭಾವ ಹೆಚ್ಚಾಗಿ ಗೋಚರಿಸುತ್ತಿದ್ದು, ಇದು ಈ ಸಾರಿ ಉಪಚುನಾವಣೆಯ ಕಾಂಗ್ರೆಸ್ ಸ್ಥಾನ ಗಳಿಕೆಯ ಮೇಲೆ ಪರಿಣಾಮ ಬೀರಲಿದೆ ಎಂಬ ಮಾತು ಕೇಳಿಬರುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಒಂದೇ ವೇದಿಕೆ ಹಂಚಿಕೊಂಡದ್ದು ಈ ಉಪಚುನಾವಣೆಯಲ್ಲಿ ಎಲ್ಲೂ ಕಂಡುಬಂದಿಲ್ಲ.
ಪ್ರತ್ಯೇಕವಾಗಿ ಕೆಲವೇ ಕೆಲವು ಕ್ಷೇತ್ರಗಳನ್ನು ಆಯ್ದುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಡೀ ರಾಜ್ಯದ 15 ಕ್ಷೇತ್ರಗಳನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಉಳಿದ ನಾಯಕರು ಈ ಚುನಾವಣೆಯನ್ನ ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಂತೆ ಕಂಡು ಬರುತ್ತಿಲ್ಲ.
ಅಲ್ಲದೇ ಹಲವು ರಾಜ್ಯ ನಾಯಕರು ಕೆಲವು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿರುವುದು ಗೋಚರಿಸುತ್ತಿದೆ. ಅನಾರೋಗ್ಯದ ನೆಪವೊಡ್ಡಿ ಹಲವು ದಿನಗಳಿಂದ ಪ್ರಚಾರ ಕಾರ್ಯಕ್ಕೆ ಆಗಮಿಸದ ಪರಮೇಶ್ವರ್ ಇಂದು ಪ್ರಚಾರ ಕಣಕ್ಕೆ ಇಳಿದಿದ್ದು, ಬೆಂಗಳೂರಿನ ಬದಲು ಏಕಾಏಕಿ ಮೈಸೂರಿನ ಹುಣಸೂರಿಗೆ ತೆರಳಿದ್ದು ಅಚ್ಚರಿ ತರಿಸಿದೆ.