ಬೆಂಗಳೂರು: ಮಂಡ್ಯದ ಪಾಂಡವಪುರ ಸಕ್ಕರೆ ಕಾರ್ಖಾನೆ ಗುತ್ತಿಗೆ ಒಡಂಬಡಿಕೆ ಕಡತ ವಿಲೇವಾರಿ ಎರಡು ವರ್ಷವಾದರೂ ಆಗಿಲ್ಲ. ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ತಡೆ ಹಿಡಿದಿದ್ದಾರೆ ಎಂದು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಸದನದಲ್ಲೇ ನೇರ ಆರೋಪ ಮಾಡಿದ್ದು ಗದ್ದಲ ಸೃಷ್ಟಿಸಿತು. ಈ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷ ಸದಸ್ಯರು ಪಟ್ಟುಹಿಡಿದರು. ಆದರೆ, ಇದಕ್ಕೆ ಅವಕಾಶ ನಿರಾಕರಿಸಿದ ಸಭಾಪತಿ ನೋಟಿಸ್ ನೀಡಿ ನಂತರ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ರೂಲಿಂಗ್ ನೀಡಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸುನೀಲ್ ವಲ್ಯಾಪುರೆ ಪ್ರಶ್ನೆಗೆ ಉತ್ತರಿಸಿದ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಸಕ್ಕರೆ ಕಾರ್ಖಾನೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಥನಾಲ್ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಎಥೆನಾಲ್ ಉತ್ಪಾದನೆ ನಮ್ಮ ಇಲಾಖೆ ವ್ಯಾಪ್ತಿಗೆ ಬರಲಿದೆ.
ಆದರೆ, ಮಾರಾಟ ಅಬಕಾರಿ ಇಲಾಖೆಗೆ ಬರಲಿದೆ. ಸಮಸ್ಯೆ ಇದ್ದರೆ ಎರಡೂ ಇಲಾಖೆಗಳ ಸಭೆ ನಡೆಸಲಾಗುತ್ತದೆ. ರೈತರಿಗೆ ಹಣ ಪಾವತಿ ವಿಳಂಬ ತಪ್ಪಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಲಕ್ಮಣ ಸವದಿ, ಮೂರು ತಿಂಗಳಾದರೂ ಕಡತ ವಿಲೇವಾರಿ ಆಗಲ್ಲ. ಇದನ್ನು ಸರಿಪಡಿಸುವಂತೆ ಮನವಿ ಮಾಡಿದರು. ಸವದಿ ಹೇಳಿಕೆ ಸಮರ್ಥಿಸಿಕೊಂಡ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ನಾನು ಲೀಸ್ಗೆ ತೆಗೆದುಕೊಂಡಿದ್ದೇನೆ. ಆದರೆ ನಮಗೆ ಒಪ್ಪಂದ ಮಾಡಿಕೊಡುತ್ತಿಲ್ಲ ಎಂದು ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಹೆಸರು ಉಲ್ಲೇಖಿಸಿ ಅವರು ಇಲ್ಲೇ ಇದ್ದಾರೆ ಎಂದು ನೇರ ಆರೋಪ ಮಾಡಿದರು.
ಅಲ್ಲದೇ, ನಾನು 40 ವರ್ಷ ರಾಜಕೀಯ ಜೀವನದಲ್ಲಿದ್ದೇನೆ. ನನಗೇ ಹೀಗಾಗಿದೆ ಎಂದು ಕಡತ ವಿಲೇವಾರಿ ವಿಳಂಬ ಕುರಿತು ತಮ್ಮ ಸ್ವಂತ ಅನುಭವವನ್ನು ಪ್ರಸ್ತಾಪಿಸಿದರು. ಯಾವುದೇ ಪತ್ರಗಳಿಲ್ಲದೇ ನಾನು ಈಗಾಗಲೇ 50 ಕೋಟಿ ಹೂಡಿಕೆ ಮಾಡಿದ್ದೇನೆ ಎಂದರು.
ಮಂತ್ರಿಗಳಿಗೇ ಹೀಗಾದರೆ ಜನರ ಕಥೆಯೇನು?: ಸಚಿವ ನಿರಾಣಿ ಅವರ ಈ ಹೇಳಿಕೆಯಿಂದ ಸರ್ಕಾರದ ವಿರುದ್ಧ ಪ್ರತಿಪಕ್ಷ ಸದಸ್ಯರು ಮುಗಿಬಿದ್ದರು. ಮಂತ್ರಿಗಳಿಗೇ ಹೀಗಾದರೆ ಜನರ ಕಥೆಯೇನು?. ಸಚಿವರು ಅಧಿಕಾರಿ ಹೆಸರು ಹೇಳಿದ್ದಾರೆ. ಅವರು ಮಾತನಾಡಲು ಅವಕಾಶ ನೀಡಿ ಸದಸ್ಯರು ಒತ್ತಾಯಿಸಿದರು.
ಪ್ರತಿಪಕ್ಷ ಸಚೇತಕ ಪ್ರಕಾಶ್ ರಾಥೋಡ್ ಮಾತನಾಡಿ, ಒಬ್ಬ ಮಂತ್ರಿ, ಒಬ್ಬ ಅಧಿಕಾರಿ ಹೆಸರೇಳಿ ಎರಡು ವರ್ಷ ಕಡತ ವಿಲೇವಾರಿ ಮಾಡಿಲ್ಲ ಎಂದಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದಕ್ಕೆ ಸಮಂಜಸ ಉತ್ತರ ನೀಡಬೇಕು ಎಂದರು. ಈ ವೇಳೆ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ನೋಟಿಸ್ ನೀಡಿ ಚರ್ಚೆಗೆ ಅವಕಾಶ ನೀಡುತ್ತೇನೆ ಎಂದರು.
ಇದಕ್ಕೆ ಪ್ರತಿಪಕ್ಷ ಸದಸ್ಯರ ವಿರೋಧ ವ್ಯಕ್ತಪಡಿಸಿದರು. ಇದರಿಂದ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಪಕ್ಷದ ಉಪ ನಾಯಕ ಗೋವಿಂದರಾಜು ಮಾತನಾಡಿ, ನಿರಾಣಿ ಸದನದಲ್ಲೇ ಹೇಳಿಕೆ ನೀಡಿದ್ದಾರೆ, ಸರ್ಕಾರದ ಭಾಗವಾಗಿಯೇ ಈ ರೀತಿ ಹೇಳಿಕೆ ನೀಡಿದ್ದರಿಂದ ಚರ್ಚೆಗೆ ಅವಕಾಶ ನೀಡಿ ರೂಲಿಂಗ್ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಪಾಂಡವಪುರ ಸಕ್ಕರೆ ಕಾರ್ಖಾನೆ 40 ವರ್ಷಗಳ ಕಾಲ ನಿರಾಣಿ ತೆಕ್ಕೆಗೆ
ಪ್ರತಿಪಕ್ಷದ ಬೇಡಿಕೆ ವಿರೋಧಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸದಸ್ಯರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಈ ವೇಳೆ, ಕಡತ ವಿಳಂಬಕ್ಕೆ ನಿರಾಣಿ ಉದಾಹರಣೆ ನೀಡಿದ್ದಾರೆ. ಹಿಂದೆಲ್ಲ ಹೀಗಾಗಿತ್ತು. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎನ್ನುವುದು ಅವರ ಹೇಳಿಕೆಯ ತಾತ್ಪರ್ಯ ಎಂದರು.
ಇದಕ್ಕೆ ಪ್ರತಿಪಕ್ಷ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ, ಕಾರ್ಯಾಂಗ ಮತ್ತು ಶಾಸಕಾಂಗ ಅನೇಕ ವರ್ಷಗಳಿಂದ ಬಂದ ವ್ಯವಸ್ಥೆ. ಇದರಲ್ಲಿ ಆಗುವ ವ್ಯತ್ಯಾಸಗಳಿಂದ ಕೆಲವೊಮ್ಮೆ ಘಟನೆಗಳು ಹೊರ ಬರಲಿವೆ. ಮನಸ್ಸಿಗೆ ಘಾಸಿಯಾದಾಗ ಇಂತಹ ಮಾತು ಸಚಿವರಿಂದ ಹೊರಬಂದಿದೆ. ಇದನ್ನು ದೊಡ್ಡದು ಮಾಡಬೇಡಿ ಎಂದು ಮನವಿ ಮಾಡಿದರು.
ಸಕ್ಕರೆ ಕಾರ್ಖಾನೆಗಳ ಪುನಶ್ಚೇತನ ಸರ್ಕಾರಕ್ಕೆ ಸವಾಲು: ಈ ವೇಳೆ ಜೆಡಿಎಸ್ ಸದಸ್ಯ ಬೋಜೇಗೌಡ ಮಾತನಾಡಿ, ಸಚಿವರು ಸತ್ಯ ಹೇಳಿದ್ದಾರೆ. ಸಚಿವರೊಬ್ಬರನ್ನೇ ಯಾಕೆ ಹೊಣೆ ಮಾಡಬೇಕು. ಚರ್ಚೆಗೆ ಅವಕಾಶ ನೀಡಿ ಎಂದರು. ನಂತರ ನಿರಾಣಿ ಹೇಳಿಕೆ ಕುರಿತು ಸ್ಪಷ್ಟೀಕರಣ ನೀಡಿದ ಸಕ್ಕರೆ ಸಚಿವ ಶಂಕರಪಾಟೀಲ್ ಮುನೇನಕೊಪ್ಪ, ತಮ್ಮ ನೋವಿನ ಸಂಗತಿಯನ್ನು ನಿರಾಣಿ ಹೇಳಿದ್ದಾರೆ ಎಂದರು.
ಪಾಂಡವಪುರ, ಶ್ರೀರಾಮು ಮತ್ತು ಮಲೈ ಶುಗರ್ ಕಾರ್ಖಾನೆಗಳ ಪುನಶ್ಚೇತನ ಸರ್ಕಾರಕ್ಕೆ ಸವಾಲಾಗಿದೆ. ಪಾಂಡವಪುರ ಕಾರ್ಖಾನೆಯನ್ನು ನಿರಾಣಿ ಗ್ರೂಪ್ ಟೆಂಡರ್ ಮೂಲಕ ಪಡೆದುಕೊಂಡಿದೆ. ಅವರು ಸ್ಟಾಂಪ್ ವಿನಾಯಿತಿ ಕೇಳಿದ್ದಾರೆ. ಇದರ ನೀತಿ ನಿಯಮದಲ್ಲಿ ವಿಳಂಬವಾಗಿದೆ. ಹಣಕಾಸು ಇಲಾಖೆ ಸಲಹೆ ಪಡೆದು ಸಂಪುಟದಲ್ಲಿ ಇಟ್ಟು ಸಿಎಂ ಈ ಸಮಸ್ಯೆ ಪರಿಹರಿಸಲಿದ್ದಾರೆ. ಯಾವುದೇ ಅಧಿಕಾರಿ ಆದರೂ ಸರ್ಕಾರದ ನಿಯಮ ಪಾಲಿಸಬೇಕು ಎಂದರು.
ಸಚಿವರ ಉತ್ತರಕ್ಕೆ ತೃಪ್ತರಾಗದ ಪ್ರತಿಪಕ್ಷ ಸದಸ್ಯರು ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಆದರೆ ಪ್ರತಿಪಕ್ಷ ಸದಸ್ಯರ ಬೇಡಿಕೆ ತಳ್ಳಿಹಾಕಿದ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ಇದು ಪ್ರಶ್ನೋತ್ತರ ಕಲಾಪ ಇಲ್ಲಿ ಚರ್ಚೆಗೆ ಅವಕಾಶ ನೀಡುವುದಿಲ್ಲ. ಬೇರೆ ರೂಪದಲ್ಲಿ ಚರ್ಚೆಗೆ ನೋಟಿಸ್ ನೀಡಿ ಅದಕ್ಕೆ ಅವಕಾಶ ನೀಡಲಾಗುತ್ತದೆ ಎಂದು ರೂಲಿಂಗ್ ನೀಡಿದರು.
ಇದನ್ನೂ ಓದಿ: ಸರ್ಕಾರದ ಸೂಚನೆಗೂ ಡೋಂಟ್ ಕೇರ್: ನಿರಾಣಿ ಶುಗರ್ಸ್ ಸೇರಿ 13 ಸಕ್ಕರೆ ಕಾರ್ಖಾನೆಗಳಿಂದ ಬಿಲ್ ಬಾಕಿ