ಬೆಂಗಳೂರು: ಕೃಷಿಯನ್ನೇ ಕುಲಕಸುಬನ್ನಾಗಿ ಮಾಡಿಕೊಂಡು ರೈತ ಕಾರ್ಮಿಕರಾಗಿ ಜೀವನ ಸಾಗಿಸುತ್ತಿರುವ ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಫ್ರೀಡಂ ಪಾರ್ಕ್ ನಲ್ಲಿ ಬೀಡುಬಿಟ್ಟಿರುವ ಸಮುದಾಯದವರು ಪ್ರಾಣ ಬಿಟ್ಟೇವು ಮೀಸಲಾತಿ ಬಿಡೆವು ಎಂದು ಪಟ್ಟು ಹಿಡಿದಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಧರಣಿ ಸತ್ಯಾಗ್ರಹ ಸಂಬಂಧ ಮಾರ್ಚ್ 4ರ ಡೆಡ್ಲೈನ್ ನೀಡಿದ್ದು, ವಿನಾಕಾರಣ ಗೊಂದಲ ಮೂಡಿಸುವುದು ಬೇಡ. 2011ರಲ್ಲಿ ಈ ಹಿಂದೆ ನಾಯ್ಡು ಜನಾಂಗಕ್ಕೆ ತಮ್ಮ ಪರಮಾಧಿಕಾರ ಬಳಸಿ ವೆಂಕಯ್ಯ ನಾಯ್ಡು ಅವರ ಮನವಿ ಮೇರೆಗೆ ಕ್ಯಾಬಿನೆಟ್ ಮೀಟಿಂಗ್ ಕರೆದು ಮೀಸಲಾತಿ ಕೊಟ್ಟಿದ್ದರು. ಹಾಗೇ ನಮ್ಮ ಸಮಾಜಕ್ಕೂ ನಿಮ್ಮ ಪರಮಾಧಿಕಾರ ಬಳಸಿ ನ್ಯಾಯ ಒದಗಿಸಿಕೊಡಬೇಕು ಅಂತ ನಾಡ ದೊರೆಗೆ ಮನವಿ ಮಾಡೋದಾಗಿ ತಿಳಿಸಿದರು.
ನಮ್ಮ ಸಮಾಜದ ಮುಖ್ಯಮಂತ್ರಿಗಳು ಅನ್ನೋ ಕಾರಣಕ್ಕೆ ತಾಳ್ಮೆ ಸಹನೆಯಿಂದ ಶಾಂತಿಯಿಂದ ಹೋರಾಟ ಮಾಡುತ್ತಿದ್ದೇವೆ. ನಮಗೆ ಶಾಂತವಾಗಿ ಇರೋದು ಗೊತ್ತು, ಕ್ರಾಂತಿ ಮಾಡೋದು ಗೊತ್ತು. ಈ ಹಿಂದೆ ಕ್ರಾಂತಿ ಮಾಡಲು ಹೊರಟಾಗ ಗೃಹ ಇಲಾಖೆ ಮನವಿಯ ಮೇರೆಗೆ ಹಾಗೂ ಸರ್ಕಾರಕ್ಕೆ ಮುಜುಗರ ಆಗಬಾರದು ಅನ್ನೋ ಕಾರಣಕ್ಕೆ ಶಾಂತಿಯುತವಾಗಿ ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ಹಮ್ಮಿಕೊಂಡಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪನವರ 80ನೇ ವರ್ಷದ ಹುಟ್ಟು ಹಬ್ಬ ಇವತ್ತು, 80 ವರ್ಷವಾದರೂ ಅಧಿಕಾರದಲ್ಲಿ ಕೂತು ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಅವರ ಮೇಲೆ ಬಹಳ ನಂಬಿಕೆ ಇಟ್ಟಿದ್ದೇವೆ. ಮಾರ್ಚ್ 2 ರಂದು ಕ್ಯಾಬಿನೆಟ್ ಮೀಟಿಂಗ್ ಇದ್ದು, 2ಎ ಮೀಸಲಾತಿ ಕೊಡಿಸಿ ಅಂತ ಹೇಳಿದರು.
ನಿಮಗೆ ಎರಡು ಆಯ್ಕೆಯನ್ನು ಕೊಡುತ್ತೇವೆ, ಒಂದು ಧರಣಿ ಸ್ಥಳಕ್ಕೆ ಬಂದು ಎಷ್ಟು ದಿನದೊಳಗೆ ಮಾಡುತ್ತೇವೆ ಎಂದು ಭರವಸೆ ನೀಡಬೇಕು, ಇಲ್ಲವಾದರೆ ಅಧಿವೇಶನದಲ್ಲಿ ಸಮಯಾವಧಿ ಕೊಡಿ. ಇದ್ಯಾವುದು ಆಗಿಲ್ಲ ಅಂದರೆ ನಮ್ಮಕೈನಲ್ಲಿ ಈ ಕೆಲಸ ಆಗೋದಿಲ್ಲ ಸ್ವಾಮೀಜಿ ಅಂತ ತಿಳಿಸಿಬಿಡಿ ಅಂತ ಕಿಡಿಕಾರಿದರು.