ಬೆಂಗಳೂರು: ಪಂಚಮಸಾಲಿ ಹೋರಾಟ 6ನೇ ದಿನಕ್ಕೆ ಕಾಲಿಟ್ಟಿದ್ದು, ನಗರದ ಫ್ರೀಡಂ ಪಾರ್ಕ್ನಲ್ಲಿ ಧರಣಿ ಮುಂದುವರಿದಿದೆ.
ಪಂಚಮಸಾಲಿಗೆ ಸದ್ಯಕ್ಕೆ 2ಎ ಮೀಸಲಾತಿ ಇಲ್ಲ ಎಂದು ಸರ್ಕಾರ ಪರೋಕ್ಷವಾಗಿ ತಿಳಿಸಿದ್ದು, ಹೋರಾಟ ತೀವ್ರಗೊಳಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದಿಂದ ಸ್ವಾಮಿಗಳಿಗೆ ಸಂದೇಶ ರವಾನೆಯಾಗಿದ್ದು, ನಾವು ಮೀಸಲಾತಿ ತೆಗೆದುಕೊಂಡೇ ಹೋಗ್ತೇವೆ ಎಂದು ಪಟ್ಟುಹಿಡಿದಿದ್ದಾರೆ.
ಮಾರ್ಚ್ 4ರವರೆಗೆ ಧರಣಿ ಮಾಡುತ್ತೇವೆ. ಬಳಿಕ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಟೊಂಕ ಕಟ್ಟಿ ನಿಂತಿದ್ದಾರೆ. ಮಾರ್ಚ್ 4ರ ಸಂಜೆ ಮತ್ತೆ ಸಲಹಾ ಸಮಿತಿ ಸಭೆ ನಡೆಸಿ ಮುಂದಿನ ನಿರ್ಧಾರ ಬಗ್ಗೆ ಚಿಂತನೆ ನೆಡೆಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸರ್ಕಾರದವರು ಧರಣಿ ಸ್ಥಳಕ್ಕೆ ಬಂದು ನಮ್ಮ ಜೊತೆ ಮಾತುಕತೆ ನಡೆಸಲಿ ಎಂದು ರಾಜ್ಯ ಸರ್ಕಾರಕ್ಕೆ ಪಂಚಮಸಾಲಿ ಸಮುದಾಯದ ಜನರು ಒಕ್ಕೂರಲಿನಿಂದ ಒತ್ತಾಯಿಸುತ್ತಿದ್ದಾರೆ.