ಬೆಂಗಳೂರು: ಕಾಂಗ್ರೆಸ್ ನಾಯಕರುಗಳೊಂದಿಗೆ ಪಾಕಿಸ್ತಾನದ ಧ್ವಜ ಇರುವ ಕರಪತ್ರ ಮುದ್ರಿಸಿ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರಿಗೆ ಚುನಾವಣೆಯಲ್ಲಿ ಬೆಂಬಲ ಸೂಚಿಸುವಂತೆ ಮನವಿ ಮಾಡುತ್ತಿದ್ದ ಪತ್ರವೊಂದು ವೈರಲ್ ಆಗಿದೆ. ಪಕ್ಷೇತರ ಅಭ್ಯರ್ಥಿ ಯಾರಬ್ ಇರುವ ಕರಪತ್ರ ವೈರಲ್ ಆಗಿದ್ದು ಯಶವಂತಪುರ ಪೊಲೀಸ್ ಠಾಣೆ ಹಾಗೂ ಚುನಾವಣಾ ಆಯೋಗಕ್ಕೆ ಕುಸುಮಾ ಹನುಮಂತರಾಯಪ್ಪ ದೂರು ಸಲ್ಲಿಸಿದ್ದಾರೆ.
"ಬಿಜೆಪಿಯ ಪ್ರಾಯೋಜಿತ ಅಭ್ಯರ್ಥಿಯಾಗಿರುವ ಯಾರಬ್, ಪಾಕಿಸ್ತಾನ ಧ್ವಜವಿರುವ ಕರಪತ್ರ ಮುದ್ರಿಸಿ ಅಶಾಂತಿ ನಿರ್ಮಿಸಲು ಷಡ್ಯಂತ್ರ ರೂಪಿಸಿದ್ದಾರೆ. ಯಾರಬ್ ಬಿಜೆಪಿ ಅಭ್ಯರ್ಥಿ ಮುನಿರತ್ನ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. ಕಾಂಗ್ರೆಸ್ ನಾಯಕರ ಫೋಟೋದೊಂದಿಗೆ ಪಾಕಿಸ್ತಾನ ಧ್ವಜ ಮುದ್ರಿಸುವ ಮೂಲಕ ನನ್ನ ಮೇಲೆ ಕೋಮು ಪ್ರಚೋದನೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ" ಎಂದು ಕುಸುಮಾ ಆರೋಪಿಸಿದ್ದಾರೆ. ಅಲ್ಲದೇ, ಯಾರಬ್ ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಕುಸುಮಾ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮತದಾರರಿಗೆ ತವಾ ಹಂಚಿಕೆ ಆರೋಪ; ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಡಿ.ಕೆ.ಸುರೇಶ್ ವಿರುದ್ಧ ಪ್ರಕರಣ
ಕುಸುಮಾ, ಡಿ.ಕೆ.ಸುರೇಶ್ ವಿರುದ್ಧ ಪ್ರಕರಣ: ಮತದಾರಿಗೆ ಆಮಿಷವೊಡ್ಡಿದ ಆರೋಪದಡಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಹಾಗೂ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಮೂವರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಕ್ಷೇತ್ರದಲ್ಲಿ ಮತದಾರರಿಗೆ ತವಾ ಹಂಚುತ್ತಿದ್ದ ಬಗ್ಗೆ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದು, ಸ್ಥಳದಲ್ಲಿದ್ದವರು ಪರಾರಿಯಾಗಿದ್ದರು. ಈ ಸಂದರ್ಭದಲ್ಲಿ ಓರ್ವ ಆರೋಪಿ ಸಿಕ್ಕಿಬಿದ್ದಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಪತ್ತೆಯಾದ ತವಾ ಬಾಕ್ಸ್ಗಳನ್ನು ಪರಿಶೀಲಿಸಿದಾಗ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹಾಗೂ ಡಿ.ಕೆ.ಸುರೇಶ್ ಭಾವಚಿತ್ರಗಳು ಕಂಡುಬಂದಿದ್ದವು. ಚುನಾವಣಾ ಅಧಿಕಾರಿಗಳು ನೀಡಿದ ದೂರಿನನ್ವಯ ಕೇಸು ದಾಖಲಾಗಿದೆ.
ಇದನ್ನೂ ಓದಿ: ಮುನಿರತ್ನ ನನ್ನ ಬಗ್ಗೆ ಅತ್ಯಂತ ತುಚ್ಛವಾಗಿ ಮಾತನಾಡಿದ್ದಾರೆ : ಕುಸುಮಾ ಹನುಮಂತರಾಯಪ್ಪ
ಅಮಿತ್ ಶಾ ವಿರುದ್ಧ ದೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂಸಾಚಾರ ಆಗುತ್ತದೆ ಎಂದು ರಾಜ್ಯದ ಮತದಾರರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸರಿಗೆ ಇತ್ತೀಚೆಗೆ ದೂರು ಸಲ್ಲಿಸಿದ್ದರು. ಮತದಾರರಿಗೆ ಬೆದರಿಕೆ ಆರೋಪದ ಮೇಲೆ ಕೇಂದ್ರ ಸಚಿವ ಅಮಿತ್ ಶಾ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ವಕ್ತಾರ ಗೌರವ್ ವಲ್ಲಭ್ ದೂರು ನೀಡಿದ್ದರು.
ಇದನ್ನೂ ಓದಿ: Karnataka Election: ಅಮಿತ್ ಶಾ ವಿರುದ್ಧ ಕಾಂಗ್ರೆಸ್ ನಾಯಕರಿಂದ ಪೊಲೀಸರಿಗೆ ದೂರು