ಬೆಂಗಳೂರು : ಕೋವಿಡ್ ಸೋಂಕಿತ ಅಥವಾ ಪ್ರಾಥಮಿಕ ಸಂಪರ್ಕಕ್ಕೆ ಒಳಗಾದ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವ ಸಂಬಂಧ ಸೂಕ್ತ ಆದೇಶ ಹೊರಡಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕಾರ್ಖಾನೆಗಳಲ್ಲಿ ಹಾಗೂ ಉದ್ದಿಮೆಗಳಲ್ಲಿ ದುಡಿಯುವ ಕಾರ್ಮಿಕರು ಸೋಂಕಿಗೆ ಒಳಗಾಗದಂತೆ ಕಾರ್ಯ ನಿರ್ವಹಿಸಲು ಎಸ್ಒ,ಪಿ ಮಾರ್ಗಸೂಚಿಗಳನ್ನು ರೂಪಿಸುವಂತೆ ಹಾಗೂ ಸೋಂಕಿಗೆ ತುತ್ತಾದಲ್ಲಿ ಅಥವಾ ಕ್ವಾರಂಟೈನ್‌ಗೆ ಒಳಗಾದಲ್ಲಿ 14 ದಿನಗಳ ವೇತನ ಸಹಿತ ರಜೆ, ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಐಎಟಿಯುಸಿ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ, ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ವಾದ-ಪ್ರತಿವಾದ ಆಲಿಸಿದ ಪೀಠ, ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿಯೇ ಕಾರ್ಮಿಕರ ಕ್ವಾರಂಟೈನ್ ಅವಧಿಯ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ. ಆದರೆ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯಾಲಯ ಯಾವುದೇ ಅಕ್ರಮ ಎಸಗಲು ನಿರ್ದೇಶಿಸುತ್ತಿಲ್ಲ. ಕಾರ್ಮಿಕರ ಹಿತದೃಷ್ಟಿಯಿಂದ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
ಹೀಗಾಗಿ ಕಾರ್ಮಿಕರು ಸೋಂಕಿಗೆ ತುತ್ತಾದಲ್ಲಿ ಅಥವಾ ಪ್ರಾಥಮಿಕ ಸಂಪರ್ಕಕ್ಕೆ ಒಳಗಾದಲ್ಲಿ ಕ್ವಾರಂಟೈನ್ ಅವಧಿಯನ್ನು ರಜೆ ಅಥವಾ ಗೈರು ಹಾಜರಿ ಎಂದು ಪರಿಗಣಿಸದಂತೆ ರಾಜ್ಯ ಸರ್ಕಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ನ. 9ಕ್ಕೆ ಮುಂದೂಡಿತು.