ಬೆಂಗಳೂರು: ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ್ದ 126 ಆರೋಪಿಗಳಿಗೆ ಕೋರ್ಟ್ ಜಾಮೀನು ನೀಡಿದ ಕಾರಣ ಇಂದು ಅವರನ್ನು ಹಜ್ ಭವನದಿಂದ ಬಿಡುಗಡೆಗೊಳಿಸಲಾಯ್ತು. ಈ ವೇಳೆ ಆರೋಪಿಗಳಿಗೆ ಶಾಸಕ ಜಮೀರ್ ಅಹ್ಮದ್ ಅದ್ದೂರಿ ಸ್ವಾಗತ ಕೋರಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಹಳೆ ಗುಡ್ಡದಹಳ್ಳಿ ಬಳಿಯ ಹಜ್ ಭವನದಲ್ಲಿ ಆರೋಪಿಗಳಿಗೆ ಆಶ್ರಯ ಒದಗಿಸಲಾಗಿದ್ದು, ಕೊರೊನಾ ಸೋಂಕು ಲಕ್ಷಣ ಪರೀಕ್ಷಿಸಿ ಇಂದು ಬಿಡುಗಡೆ ಮಾಡಲಾಗಿದೆ. ಹೀಗಾಗಿ ತಮ್ಮವರನ್ನು ಸ್ವಾಗತಿಸಲು ಪಾದರಾಯನಪುರದ ಜನ ಹಾಗೂ ಶಾಸಕ ಜಮೀರ್ ಅಹಮ್ಮದ್ ಸ್ಥಳಕ್ಕೆ ಆಗಮಿಸಿದ್ದರು.
ಜಾಮೀನು ಪಡೆದ ಜನರಿಗೆ ಶಾಸಕ ಜಮೀರ್, ಸ್ಯಾನಿಟೈಸರ್, ಹಣ ಮತ್ತು ಮೂರು ಬಸ್ಸುಗಳ ವ್ಯವಸ್ಥೆ ಮಾಡಿ ಮನೆಗಳಿಗೆ ಕಳುಹಿಸಿಕೊಟ್ಟರು. ಈ ವೇಳೆ ಜನರು ಕಿಕ್ಕಿರಿದು ತುಂಬಿದ ಕಾರಣ ಅವರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು.
ಪ್ರಕರಣದ ಹಿನ್ನೆಲೆ:
ನಗರದ ಪಾದರಾಯನಪುರ ಬಳಿ ಬಿಬಿಎಂಪಿ ಸಿಬ್ಬಂದಿ ಹಾಗೂ ಆರೋಗ್ಯಧಿಕಾರಿಗಳು ಕೊರೊನಾ ಸೋಂಕಿತನ ಸಂಪರ್ಕದಲ್ಲಿದ್ದ 58 ಜನರನ್ನ ಕ್ವಾರಂಟೈನ್ ಮಾಡಲು ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಉದ್ರಿಕ್ತರ ಗುಂಪು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಸೀಲ್ಡೌನ್ಗೆ ಅಳವಡಿಸಿದ್ದ ಬ್ಯಾರಿಕೇಡ್ ಕಿತ್ತು ಬಿಸಾಕಿದ್ದರು.
ಈ ಘಟನೆ ನಡೆದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿದ ಪೊಲೀಸರು ಅವರನ್ನು ಜೈಲಿಗಟ್ಟಿದ್ದರು. ಸದ್ಯ ಜಾಮೀನು ಮಂಜೂರು ಹಿನ್ನೆಲೆ ಆರೋಪಿಗಳು ಬಿಡುಗಡೆಯಾಗಿದ್ದಾರೆ.