ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ರಾಜ್ಯದಲ್ಲಿ ಭೂ ಕಬಳಿಕೆದಾರರ ಮೇಲೆ ಕ್ರಮ ಜರುಗಿಸುವ ವಿಚಾರವಾಗಿ, ಎಸ್ಐಟಿ ರಚನೆಗೆ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ)ಶಿಫಾರಸು ಮಾಡಿದೆ.
ವಿಧಾನಸೌಧದಲ್ಲಿ ಹೆಚ್.ಕೆ. ಪಾಟೀಲ್ ನೇತೃತ್ವದಲ್ಲಿ ಲೆಕ್ಕಪತ್ರ ಸಮಿತಿ ಸಭೆ ನಡೆಯಿತು. ಈಗಾಗಲೇ ಭೂ ಕಬಳಿಕೆದಾರರ ವಿರುದ್ಧ ಕ್ರಮ ಜರುಗಿಸಲು ವಿಶೇಷ ಕೋರ್ಟ್ ಸ್ಥಾಪಿಸಿದ್ದರೂ, ಪರಿಣಾಮಕಾರಿಯಾಗದ ಹಿನ್ನೆಲೆ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ಎಸ್ಐಟಿ ಸ್ಥಾಪನೆಗೆ ಪಿಎಸಿ ಶಿಫಾರಸು ಮಾಡಿದೆ.
ಬೆಂಗಳೂರು ಮತ್ತು ರಾಜ್ಯದಲ್ಲಿ ಸರ್ಕಾರಿ ಭೂ ಕಬಳಿಕೆ ಕುರಿತು ಪರಿಣಾಮಕಾರಿ ಕ್ರಮ ಜರುಗಿಸದ ಹಿನ್ನೆಲೆ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಭೂ ಕಬಳಿಕೆ ಸಂಬಂಧ ಹಲವಾರು ವರದಿಗಳು ಬಂದಿವೆ. ಎ.ಟಿ. ರಾಮಸ್ವಾಮಿ, ಅದಕ್ಕೂ ಮುನ್ನ ಲಕ್ಷ್ಮಣ್ರಾವ್ ಸಮಿತಿ, 2018ರಲ್ಲಿ ಕೆ.ಬಿ. ಕೋಳಿವಾಡ ನೇತೃತ್ವದಲ್ಲಿ ಮತ್ತೊಂದು ಸದನ ಸಮಿತಿಯೂ ಸರ್ಕಾರಕ್ಕೆ ವರದಿ ಸಲ್ಲಿಸಿದೆ. 2018ರಲ್ಲಿ ಮಹಾಲೇಖಪಾಲಕರು ಭೂ ಕಬಳಿಕೆ ಬಗ್ಗೆ ವರದಿ ನೀಡಿದ್ದಾರೆ. ಕಬಳಿಕೆ ಬಗ್ಗೆ ಪ್ರಕರಣ ದಾಖಲಿಸಿ ಭೂ ಮಾಫಿಯಾವನ್ನು ಮಟ್ಟ ಹಾಕಬೇಕಿತ್ತು. ಯಾವುದೂ ಸಹ ಸರ್ಕಾರದ ಮಟ್ಟದಲ್ಲಿ ಪ್ರಕರಣ ದಾಖಲಿಸಲು ಪ್ರಯತ್ನ ನಡೆಸಲಿಲ್ಲ. ಭೂಮಿಯನ್ನು ಮರು ಸ್ವಾಧೀನಪಡಿಸಿಕೊಳ್ಳಲು ಕಾರ್ಯಕ್ರಮ ರೂಪಿಸಲಿಲ್ಲ ಎಂಬ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಇಂದಿನ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿಗೆ ಪ್ರಕರಣದ ಗಂಭೀರತೆಯನ್ನು ತಿಳಿಸಿ ಖಡಕ್ ಸೂಚನೆ ನೀಡಲಾಗಿದೆ. ಎಷ್ಟು ದಿನಗಳ ಒಳಗಾಗಿ ಇಂತಹ ಪ್ರಕರಣಗಳನ್ನು ಎಫ್ಐಆರ್ ದಾಖಲಿಸಿ, ಜಮೀನು ವಾಪಸ್ ಪಡೆಯಲು ಪ್ರಕ್ರಿಯೆ ನಡೆಯುತ್ತದೆ ಎಂಬುದರ ಸ್ಪಷ್ಟ ಮಾಹಿತಿ ನೀಡಬೇಕು. ಅಲ್ಲದೇ ಹಿಂಪಡೆದ ಸರ್ಕಾರಿ ಭೂಮಿಗೆ ತಂತಿ ಬೇಲಿ ಹಾಕಬೇಕು, ಜಮೀನಿನಲ್ಲಿ ಬೋರ್ಡ್ ಹಾಕಬೇಕು ಅಥವಾ ಪ್ರಮುಖ ಪ್ರದೇಶವಾಗಿದ್ದರೆ ಕಾಂಪೌಂಡ್ ಹಾಕಿ ಸಂರಕ್ಷಣೆ ಮಾಡಬೇಕಾಗಿದೆ ಎಂದು ಸೂಚನೆ ನೀಡಲಾಗಿದೆ.
31 ಸಾವಿರ ಎಕರೆ ಅಕ್ರಮ ಒತ್ತುವರಿ ಭೂಮಿಯನ್ನು ಹಿಂಪಡೆದುಕೊಳ್ಳಲಾಗಿದೆ. 180 ಎಕರೆ ಜಮೀನಿಗೆ ಮಾತ್ರ ರಕ್ಷಣೆ ಮಾಡಲಾಗಿದೆ. ಇದು ಬಿಡಿಎ, ಬಿಬಿಎಂಪಿ ಮತ್ತು ಕಂದಾಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಕ್ಷಣ ಭೂಮಿ ರಕ್ಷಣೆ ಕುರಿತು ಮುಖ್ಯ ಕಾರ್ಯದರ್ಶಿಗೆ ಕಠಿಣ ಸೂಚನೆ ನೀಡಲಾಗಿದೆ.
ಹೈಕೋರ್ಟ್ ಮತ್ತು ಗ್ರೀನ್ ಟ್ರಿಬ್ಯುನಲ್ಗಳು ಈ ಸಂಬಂಧ ಸಾಕಷ್ಟು ನಿರ್ದೇಶನಗಳನ್ನು ನೀಡಿದೆ. ಸಂವಿಧಾನಿಕ ವ್ಯವಸ್ಥೆಯೊಳಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನೂ ಚರ್ಚಿಸಲಾಗಿದೆ. ಈ ವೇಳೆ ಎಸ್ಐಟಿ ಸ್ಥಾಪನೆ ಬಗ್ಗೆ ಸಿಎಂ ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸುವುದಾಗಿ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಭರವಸೆ ನೀಡಿದ್ದಾರೆ.