ಬೆಂಗಳೂರು : ರಾಜಧಾನಿಯ ಹೊರವರ್ತುಲ ರಸ್ತೆಗಳು ಸಾರ್ವಜನಿಕರ ಪಾಲಿಗೆ ಡೇಂಜರ್ ಆಗಿ ಪರಿಣಮಿಸಿವೆ. ಸಂಚಾರ ದಟ್ಟಣೆ ಕಡಿವಾಣ ಹಾಕಲು ಪರ್ಯಾಯವಾಗಿ ನಿರ್ಮಿಸಲಾಗಿದ್ದ ರಸ್ತೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ 117 ಅಪಫಾತಗಳು ಸಂಭವಿಸಿದ್ದು, 76 ಮಂದಿ ಬಲಿಯಾಗಿದ್ದಾರೆ.
ನಗರದಲ್ಲಿ ಹೊರವರ್ತುಲ ರಸ್ತೆಗಳ ವ್ಯಾಪ್ತಿ ಸುಮಾರು 60 ಕಿಲೋಮೀಟರ್ ಇದೆ. ಗೊರಗುಂಟೆಪಾಳ್ಯ, ಹೆಬ್ಬಾಳ, ನಾಗವಾರ, ಟಿನ್ ಫ್ಯಾಕ್ಟರಿ, ಮಾರತ್ ಹಳ್ಳಿ, ಸಿಲ್ಕ್ ಬೋರ್ಡ್, ಹೊಸಕೆರೆಹಳ್ಳಿ ಸೇರಿದಂತೆ ಹಲವು ಸುತ್ತಮುತ್ತಲಿನ ರಸ್ತೆಗಳು ಔಟರ್ ರಿಂಗ್ ರಸ್ತೆ ವ್ಯಾಪ್ತಿಗೆ ಬರಲಿವೆ. ಇಲ್ಲಿ ಮೂರು ವರ್ಷಗಳಲ್ಲಿ 117 ಅಪಘಾತ ಸಂಭವಿಸಿದ್ದು, 76 ಮಂದಿ ಬಲಿಯಾಗಿದ್ದಾರೆ. ಒಟ್ಟಾರೆಯಾಗಿ ಸಂಚಾರ ಪೊಲೀಸರು ಗುರುತಿಸಿದ 59 ಬ್ಲಾಕ್ ಸ್ಪಾಟ್ ಗಳಲ್ಲಿ ಮೂರು ವರ್ಷಗಳಲ್ಲಿ 755 ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 326 ಮಂದಿ ಬಲಿಯಾಗಿದ್ದಾರೆ.
ಮೃತ್ಯುಕೂಪವಾಗಿರುವ ಹೊರವರ್ತುಲ ರಸ್ತೆಗಳು : ಸಂಭವಿಸಿದ ಅತಿ ಹೆಚ್ಚು ಅಪಘಾತಗಳು ಹೊರವರ್ತುಲ ರಸ್ತೆಗಳಲ್ಲೇ ನಡೆದಿವೆ. ಎರಡನೇ ಸ್ಥಾನದಲ್ಲಿ ಕೆಂಪೇಗೌಡ ಏರ್ ಪೋರ್ಟ್ ರಸ್ತೆಯಿದೆ. ಹೆಬ್ಬಾಳದಿಂದ ಯಲಹಂಕ, ಚಿಕ್ಕಜಾಲ, ಟ್ರಂಪೆಟ್ ಜಂಕ್ಷನ್ ವರೆಗೂ ಸುಮಾರು 26 ಕಿ.ಮೀ ಗಳಿದ್ದು, ಈ ರಸ್ತೆಗಳಲ್ಲಿ 13 ಬ್ಲಾಕ್ಸ್ಪಾಟ್ಗಳನ್ನ ಟ್ರಾಫಿಕ್ ಪೊಲೀಸರು ಗುರುತಿಸಿದ್ದಾರೆ. ಇಲ್ಲಿ 131 ಅಪಘಾತಗಳು ನಡೆದಿದ್ದು, ಈ ಪೈಕಿ 65 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆ ನೀಡಿದ ಅಂಕಿ-ಅಂಶಗಳೇ ದೃಢೀಕರಿಸಿವೆ.
ರಾತ್ರಿ ವೇಳೆ ಅಪಘಾತ ಹೆಚ್ಚು : ನಗರದ ಒಳವರ್ತುಲ ರಸ್ತೆಗಳಲ್ಲಿ ಹೆಚ್ಚಾಗುತ್ತಿರುವ ವಾಹನ ದಟ್ಟಣೆ ಕಡಿಮೆ ಮಾಡಲು ಹೊರವರ್ತುಲ ರಸ್ತೆ ನಿರ್ಮಿಸಲಾಗಿತ್ತು. ಕಾಲ ಕ್ರಮೇಣ ಬೆಂಗಳೂರು ಬೆಳೆಯುತ್ತಿದ್ದಂತೆ ವಾಹನ ಸಂಚಾರ ದಟ್ಟಣೆ ಅಧಿಕವಾಗತೊಡಗಿತು. ದಿನಕ್ಕೆ ಲಕ್ಷಾಂತರ ವಾಹನಗಳು ಇದೇ ರಸ್ತೆಗಳಲ್ಲಿ ಸಂಚಾರ ನಡೆಸುತ್ತಿದೆ. ಹಗಲಿನಲ್ಲಿ ಸಂಚಾರ ದಟ್ಟಣೆ ಅಧಿಕ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಹೆಚ್ಚು ಅಪಘಾತಗಳಾಗಿವೆ. ನಮ್ಮ ಮೆಟ್ರೊ ಕಾಮಗಾರಿ ಸೇರಿ ವಿವಿಧ ರೀತಿಯ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಭಾರಿ ತೂಕದ ವಾಹನಗಳ ಚಾಲನೆ ಹೆಚ್ಚು ಇರುವುದರಿಂದ ಆಕ್ಸಿಡೆಂಟ್ ಗಳು ಹೆಚ್ಚಾಗಿವೆ. ಮದ್ಯಸೇವನೆ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ಚಾಲನೆ, ಅವೈಜ್ಞಾನಿಕ ರಸ್ತೆ, ಅನಗತ್ಯ ಕಡೆಗಳಲ್ಲಿ ಉಬ್ಬು ನಿರ್ಮಾಣದಿಂದಾಗಿ ಹೆಚ್ಚು ಅಪಘಾತಗಳು ಸಂಭವಿಸಿವೆ.
ಏರ್ ಪೋರ್ಟ್ ರಸ್ತೆ ಹೆಚ್ಚು ಅಪಘಾತ ನಡೆದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಪಾಲನಹಳ್ಳಿ, ಯಲಹಂಕ ಏರ್ ಫೋರ್ಸ್, ಹುಣಸಮಾರನಹಳ್ಳಿ, ಎಂವಿಐಟಿ, ಕದಿಗೇನಹಳ್ಳಿ ಗೇಟ್ ಹಾಗೂ ಸಾದಹಳ್ಳಿ ಗೇಟ್ ಬಳಿ ಹೆಚ್ಚು ಅಪಘಾತಗಳು ಸಂಭವಿಸಿವೆ. ಇನ್ನೂ ಹೊಸೂರು ರೋಡ್ ಮಾರ್ಗದ ಮಡಿವಾಳದಿಂದ ಎಲೆಕ್ಟ್ರಾನಿಕ್ ಸಿಟಿದವರೆಗಿನ ವ್ಯಾಪ್ತಿಯಲ್ಲಿ 133 ಅಪಘಾತ ಪ್ರಕರಣ ವರದಿಯಾಗಿದ್ದು, 33 ಮಂದಿ ಜೀವ ತೆತ್ತಿದ್ದಾರೆ. ಏರ್ ಪೋರ್ಟ್ ರಸ್ತೆಯಲ್ಲಿ ವೇಗದ ಮಿತಿ ಮೀರಿ ಚಾಲನೆ, ಅಗತ್ಯ ಕಡೆಗಳಲ್ಲಿ ಸೂಚನಾ ಫಲಕ ಇಲ್ಲದಿರುವುದು, ರಸ್ತೆ ಗುಂಡಿ, ಪಾದಚಾರಿ ರಸ್ತೆ ಇಲ್ಲದಿರುವುದರಿಂದಲೇ ಆಕ್ಸಿಡೆಂಟ್ ಹೆಚ್ಚಾಗಲು ಕಾರಣವಾಗಿದೆ.
ಅಪಘಾತ ತಡೆಯಲು ಸೂಕ್ತ ಕ್ರಮ : ಗುರುತಿಸಲಾಗಿರುವ 59 ಬ್ಲಾಕ್ ಸ್ಪಾಟ್ ಗಳಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿದೆ. ಈ ಪ್ರದೇಶಗಳಲ್ಲಿ ಯಾಕೆ ಹೆಚ್ಚು ಅಪಘಾತ ಸಂಭವಿಸುತ್ತದೆ ಎಂಬ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸುತ್ತೇವೆ. ಈ ಸಂಬಂಧ ಬಿಬಿಎಂಪಿ, ಜಲಮಂಡಳಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಮನ್ವಯ ಸಾಧಿಸಿ ರಸ್ತೆಯಲ್ಲಿ ಉದ್ಭವಾಗಿರುವ ಲೋಪಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ. ಅಲ್ಲದೆ ರಸ್ತೆಯಲ್ಲಿ ನಿರ್ಮಿಸಿರುವ ಹಂಪ್ಸ್ಗಳನ್ನು ತೆರವುಗೊಳಿಸಿ ಅಗತ್ಯ ಕಡೆಗಳಲ್ಲಿ ಬೀದಿದೀಪ ಹಾಕಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.
59 ಬ್ಲಾಕ್ ಸ್ಪಾಟ್ ಗಳು :
ರಸ್ತೆ ಹೆಸರು | ಬ್ಲಾಕ್ ಸ್ಪಾಟ್ ಗಳ ಸಂಖ್ಯೆ |
ಹೊರವರ್ತುಲ ರಸ್ತೆ | 19 |
ಏರ್ ಪೋರ್ಟ್ ರೋಡ್ | 13 |
ಹೊಸೂರು ರಸ್ತೆ | 08 |
ಮೈಸೂರು ರಸ್ತೆ | 04 |
ಓಲ್ಡ್ ಏರ್ ಪೋರ್ಟ್ ರೋಡ್ | 04 |
ತುಮಕೂರು ರಸ್ತೆ | 04 |
ಒಳವರ್ತುಲ ರಸ್ತೆ | 01 |
ಇನ್ನಿತರ ರಸ್ತೆಗಳು | 06 |
ಇದನ್ನೂ ಓದಿ : ಗಂಗಾವಳಿ ಸೇತುವೆ ಮೇಲೆ ಓಡಾಟಕ್ಕೆ ಜನರಿಗೆ, ದ್ವಿಚಕ್ರ ವಾಹನಗಳಿಗೆ ಅವಕಾಶ: ಗ್ರಾಮಸ್ಥರು ಸಂತಸ