ಬೆಂಗಳೂರು: ನಮ್ಮ ಹಕ್ಕುಗಳನ್ನು ಹೋರಾಟ ಮಾಡಿಯೇ ಪಡೆದುಕೊಳ್ಳುತ್ತೇವೆ, ನಮ್ಮದು ಶಾಂತಿಯುತ ಹೋರಾಟ, ಇದರಲ್ಲೇ ನಮ್ಮ ಗುರಿ ಸಾಧನೆಯಾಗುತ್ತದೆ ಎಂದು ಭಾವಿಸುತ್ತೇನೆ ಎಂದು ಕಾಗಿನೆಲೆಯ ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಸ್ವಾಮಿಗಳು ಹೇಳಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕುರುಬರ ಎಸ್ಟಿ ಹೋರಾಟ ಸಮಿತಿಯ 21ನೇ ದಿನದ ಪಾದಯಾತ್ರೆಯ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು. ಕುರುಬರನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಬೇಕೆನ್ನುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಕ್ಕೊತ್ತಾಯ ಎಂದು ಸ್ವಾಮಿಜಿ ತಿಳಿಸಿದರು.
ಎಸ್ಟಿ ಹೋರಾಟಕ್ಕೆ ಆರ್ಎಸ್ಎಸ್ ಹಣ ನೀಡುತ್ತಿದೆ ಎನ್ನುವ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದ ಶ್ರೀ ಈಶ್ವರಾನಂದ ಸ್ವಾಮಿಜಿ," ಹೋರಾಟ ನಡೆಯುತ್ತಿರುವುದು ಜನರ ಹಣದಿಂದ, ನಮ್ಮ ಹೋರಾಟ ಯಾರ ಪರ ಅಥವಾ ವಿರುದ್ದವೂ ಅಲ್ಲ, ನಮ್ಮ ಹಕ್ಕು ಪಡೆಯಲಷ್ಟೇ " ಎಂದು ಸ್ಪಷ್ಟಪಡಿಸಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಮಾಜಿ ಸಚಿವ ಎಚ್.ವಿಶ್ವನಾಥ್, ಕುರುಬರಿಗೆ ತಮ್ಮದೇ ಆದ ಸಂಸ್ಕೃತಿ, ಆಚರಣೆ ಮತ್ತು ವೃತ್ತಿ ಇದ್ದು ಇದು ಎಸ್ಟಿ ಪಟ್ಟಿಗೆ ಸೇರಲು ಅಗತ್ಯವಾದ ಮಾನದಂಡ ಎಂದು ಪ್ರತಿಪಾದಿಸಿದರು.
ಸಮಾರಂಭದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರುಗಳಾದ ಬಂಡೆಪ್ಪ ಕಾಶಂಪುರ, ಎಚ್.ಎಂ.ರೇವಣ್ಣ, ಹೋರಾಟ ಸಮಿತಿಯ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಮತ್ತಿತರರು ಪಾಲ್ಗೊಂಡಿದ್ದರು.