ಬೆಂಗಳೂರು: ಇ-ಆಸ್ತಿ ತಂತ್ರಾಂಶವನ್ನು ಮಹಾನಗರ ಪಾಲಿಕೆಗಳಲ್ಲಿ ಅನುಷ್ಠಾನಗೊಳಿಸಲು ನಗರಾಭಿವೃದ್ಧಿ ಇಲಾಖೆಯಿಂದ ಆದೇಶ ಹೊರಡಿಸಲಾಗುತ್ತದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಸ್ತಿಗಳ ವರ್ಗಾವಣೆ ನಮೂನೆಗಳ ಪಡೆಯುವಿಕೆ ತ್ವರಿತಗತಿಯಲ್ಲಿ ನಿರ್ವಹಿಸಲು ಇ-ಆಸ್ತಿ ತಂತ್ರಾಂಶವನ್ನು 203 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಇ-ಆಸ್ತಿ ತಂತ್ರಾಂಶವನ್ನು ಪಾಲಿಕೆಗಳಲ್ಲಿಯೂ ಅನುಷ್ಠಾನಗೊಳಿಸಲು ನಗರಾಭಿವೃದ್ಧಿ ಇಲಾಖೆಯಿಂದ ಆದೇಶ ಹೊರಡಿಸಲಾಗುತ್ತದೆ ಎಂದರು.
ಶೇ. 40ರಷ್ಟು ಜನ ಇವತ್ತು ನಗರವ್ಯಾಪ್ತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇನ್ನೊಂದೆರಡು ವರ್ಷದಲ್ಲಿ ಇದು ಶೇ. 50ರಷ್ಟು ಆಗಲಿದೆ. ಹೀಗಾಗಿ, ನಗರದ ಮೂಲಭೂತ ಸೌಕರ್ಯಗಳನ್ನು ಇನ್ನಷ್ಟು ಹೆಚ್ಚಿಸುವುದು ನಮ್ಮ ಇಲಾಖೆಯ ಜವಾಬ್ದಾರಿ ಎಂದರು.
ಪ್ರತಿಯೊಂದು ಪ್ರದೇಶ ಅಭಿವೃದ್ಧಿ ಆಗಬೇಕೆಂದರೆ ನಗರ ಪ್ರದೇಶದ ಅಭಿವೃದ್ಧಿ ಬಹಳ ಮುಖ್ಯ. ಇವತ್ತು ಹೆಚ್ಚಿನ ಆದಾಯ ನಗರ ಪ್ರದೇಶದಿಂದ ಸಂಗ್ರಹವಾಗುತ್ತಿದೆ. ನಗರದಲ್ಲಿ ಸಂಗ್ರಹವಾಗುವ ಆದಾಯವನ್ನು ಹಳ್ಳಿಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ. ಹಾಗಾಗಿ, ನಗರಗಳ ಅಭಿವೃದ್ಧಿ ಮುಖ್ಯ. ನಗರ ಅಭಿವೃದ್ಧಿಯಾಗಬೇಕೆಂದರೆ ಅಲ್ಲಿ ಆರ್ಥಿಕ ಚಲನವಲನ ಆಗಬೇಕು. ಹಾಗಾದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಬಂಡವಾಳ ಹಾಕುವವರಿಗೆ ವಾಪಸ್ ಬರಬೇಕು. ಅವರು ನೆಮ್ಮದಿಯಿಂದ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಜೀವಿಸುವಂತೆ ಮಾಡಬೇಕು.
ಆ ಕೆಲಸವನ್ನು ನಾವು ಮಾಡಿದ್ದೇವೆ. ಇಷ್ಟೆಲ್ಲ ಮಾಡಿದರೂ ಜನರ ಸಹಕಾರ ಅತ್ಯಗತ್ಯ. ಯಾವ ನಗರದಲ್ಲಿ ಬಹಳಷ್ಟು ಶಾಂತಿ ಇದೆಯೋ ಅಲ್ಲಿಗೆ ಜನ ಹೋಗುತ್ತಾರೆ. ನಾವು ಎಷ್ಟು ಮೂಲಭೂತ ಸೌಕರ್ಯ ಕೊಟ್ಟರು ಶಾಂತಿ ಇಲ್ಲದಿದ್ದರೆ ಅಲ್ಲಿಗೆ ಹೋಗುವುದಿಲ್ಲ ಎಂದರು. ನಗರ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾಗಿ ಕೆಲ ನಿಯಮಾವಳಿಗಳನ್ನು ರೂಪಿಸಬೇಕಾಗಲಿದೆ. ಅವುಗಳನ್ನು ಕಾಲ ಕಾಲಕ್ಕೆ ಬದಲಾವಣೆ ಮಾಡಬೇಕಿದೆ. ಹೀಗಾಗಿ ನಾವು ಕೂಡ ಕೆಲ ನಿಯಮಾವಳಿ ರೂಪಿಸಿದ್ದೇವೆ ಎಂದರು.
ನಿಯಮಾವಳಿಗಳು:
- ಅಮೃತ್ ಯೋಜನೆಯಲ್ಲಿ ರಾಜ್ಯದಲ್ಲಿ ಆಯ್ಕೆಯಾಗಿರುವ 26 ನಗರಗಳಿಗೆ ಜಿಎಸ್ ಆಧಾರಿತ ಮಹಾಯೋಜನೆಯನ್ನು ತಯಾರಿಸಲು ಕ್ರಮ.
- ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಗೆ ಸಮಗ್ರ ತಿದ್ದುಪಡಿ.
- ವಾಯು ಮಾಲಿನ್ಯ ನಿಯಂತ್ರಣ ಸಂಬಂಧ ವಿದ್ಯುತ್ ಚಾಲಿತ ವಾಹನಗಳಿಗೆ ಸೌಲಭ್ಯ ಕಲ್ಪಿಸುವ ಸಂಬಂಧ ವಾಹನ ನಿಲುಗಡೆ ಹಾಗೂ ಚಾರ್ಜಿಂಗ್ ಸೌಲಭ್ಯ
- ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗೆ ಅನ್ವಯವಾಗುವಂತೆ ಜಾಹೀರಾತು ನಿಯಮ.
- ಪಿಜಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪೇಯಿಂಗ್ ಗೆಸ್ಟ್ ನಿಯಮಾವಳಿ ರಚನೆ
- ಮೊಬೈಲ್ ಟವರ್ ನಿಯಮಾವಳಿ ರಚನೆ.