ಬೆಂಗಳೂರು: ಕರ್ನಾಟಕದ ಸಾರಿಗೆ ನಿಗಮಗಳಲ್ಲಿ ಅಂತರ್‌ನಿಗಮ ವರ್ಗಾವಣೆಗೆ ಈವರೆಗೆ ಸೂಕ್ತ ಅವಕಾಶಗಳಿರಲಿಲ್ಲ. ಇದೀಗ ಸರ್ಕಾರವು ಸಾರಿಗೆ ಸಿಬ್ಬಂದಿ ಬೇಡಿಕೆಗಳಿಗೆ ಸ್ಪಂದಿಸಿ, ಇದೇ ಮೊದಲ ಬಾರಿಗೆ ಸಾರಿಗೆ ನಿಗಮದ ನೌಕರರ ಅಂತರ್‌ನಿಗಮ ವರ್ಗಾವಣೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಸೂಕ್ತ ನೀತಿ ರೂಪಿಸಿದೆ.
2016ರಲ್ಲಿ ಕೇವಲ ಒಮ್ಮೆ ಮಾತ್ರ ಅಂತರ್ ನಿಗಮ ವರ್ಗಾವಣೆ ಕೈಗೊಳ್ಳಲಾಗಿತ್ತು. ಆದರೆ, ಅಂತರ್ ನಿಗಮ ವರ್ಗಾವಣೆ ಬಯಸಿ ಅನೇಕ ಸಿಬ್ಬಂದಿ ಬೇಡಿಕೆ ಇಟ್ಟಿರುವುದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಪ್ರತಿವರ್ಷವೂ ಈ ಅಂತರ್ ನಿಗಮ ವರ್ಗಾವಣೆಯನ್ನು ನಿರಂತರ ಪ್ರಕ್ರಿಯೆಯಂತೆ ಕೈಗೊಳ್ಳಲು ಈಗ ಅವಕಾಶ ಮಾಡಿಕೊಡಲಾಗಿದೆ. ಈ ಬಗ್ಗೆ ಸೂಕ್ತ ಮಾರ್ಗಸೂಚಿಯನ್ನೂ ಹೊರಡಿಸಲಾಗಿದೆ.
ಅಂತರ ನಿಗಮ ವರ್ಗಾವಣೆಯ ಪ್ರಕ್ರಿಯೆಯು ಒಂದು ಬಾರಿಗೆ ಮಾತ್ರವಲ್ಲದೆ, ಪ್ರತಿ ವರ್ಷವೂ ಏಪ್ರಿಲ್ 1 ರಿಂದ 30 ರವರೆಗೆ ನಡೆಯುವಂತೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ನಿಗಮಗಳಿಂದಲೂ ಪ್ರತಿ ವರ್ಷ ಒಟ್ಟು ಸಿಬ್ಬಂದಿ ಪ್ರಮಾಣದ ಮೇಲೆ ಶೇ 2 ರಷ್ಟು ಸಿಬ್ಬಂದಿಗೆ ವರ್ಗಾವಣೆಗೆ ಅವಕಾಶವಾಗುವಂತೆ ಆದೇಶಿಸಲಾಗಿದೆ.
ವರ್ಗಾವಣೆಗೆ ಯಾವೆಲ್ಲ ಸಿಬ್ಬಂದಿಗಳು ಅರ್ಹರು?
- ವರ್ಗಾವಣೆ ಕೋರುವ ನೌಕರರು ಖಾಯಂ ನೌಕರರಾಗಿದ್ದು, ಕನಿಷ್ಠ 10 ವರ್ಷಗಳ ಸೇವೆಯನ್ನು ಮಾತೃ ಸಂಸ್ಥೆಯಲ್ಲಿ
ಸಲ್ಲಿಸಿರಬೇಕು. - ವರ್ಗಾವಣೆ ಕೋರಿ ಸಲ್ಲಿಸುವ ನೌಕರರು ಅರ್ಜಿಗಳನ್ನು ಸೇವಾ ಹಿರಿತನದ ಆಧಾರದ ಮೇಲೆ ಮಾತ್ರ ಆದ್ಯತೆಯ ಮೇಲೆ ಪರಿಗಣಿಸಲಾಗುವುದು.
- ಅಂತರ್‌ನಿಗಮ ವರ್ಗಾವಣೆ ಕೋರುವ ನೌಕರರು ಆನ್‌ಲೈನ್ ಪೋರ್ಟಲ್ ತಂತ್ರಾಂಶದ ಮೂಲಕ ನಿಗದಿಪಡಿಸಿದ ಅರ್ಜಿ ನಮೂನೆ/ಇಚ್ಛಾಪತ್ರವನ್ನು ಮತ್ತು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು.
- ನೌಕರನು ಒಂದು ಬಾರಿಗೆ ಶಾಶ್ವತವಾಗಿ ವರ್ಗಾವಣೆಯಾದ ನಂತರ ಯಾವುದೇ ಕಾರಣಕ್ಕೂ ವರ್ಗಾವಣೆಯನ್ನು
ಹಿಂಪಡೆಯಲು ಬದಲಾಯಿಸಲು ಅವಕಾಶವಿರುವುದಿಲ್ಲ.
- ನೌಕರರ ಮೇಲೆ ಶಿಸ್ತು ಪ್ರಕರಣಗಳು ಬಾಕಿ ಇದ್ದಲ್ಲಿ, ಅವರು ವರ್ಗಾವಣೆಗೆ ಅರ್ಹರಾಗಿರುವುದಿಲ್ಲ. ಒಮ್ಮೆ ವರ್ಗಾವಣೆಯಾದ ನೌಕರರು ಸೇವಾವಧಿಯಲ್ಲಿ ಪುನಃ ಅಂತರ್ ನಿಗಮ ವರ್ಗಾವಣೆಗೆ ಅರ್ಹರಾಗುವುದಿಲ್ಲ.
- ಹೈದರಾಬಾದ್-ಕರ್ನಾಟಕ ಸ್ಥಳೀಯ ಅಭ್ಯರ್ಥಿ ಎಂದು ಮೀಸಲಾತಿ ಬಯಸುವ ನೌಕರರು ಕಡ್ಡಾಯವಾಗಿ ಸ್ಥಳೀಯ ಅಭ್ಯರ್ಥಿ ಎಂಬ ಬಗ್ಗೆ ಸೂಕ್ತ ಪ್ರಾಧಿಕಾರ ನೀಡಿರುವ ಪ್ರಮಾಣ ಪತ್ರ ಸಲ್ಲಿಸಬೇಕು.
- ಪ್ರತಿ ವೃಂದದಲ್ಲಿನ ಅಂತರ್‌ನಿಗಮ ವರ್ಗಾವಣೆಯ ಶೇ 5 ರಷ್ಟು ಹುದ್ದೆಗಳನ್ನು ಪತಿ-ಪತ್ನಿ ನೌಕರರಿಗೆ (ಇಬ್ಬರು ನಿಗಮದ ನೌಕರರಾಗಿರತಕ್ಕದ್ದು) ಜೇಷ್ಠತೆಯ ಆಧಾರದ ಮೇಲೆ ಪರಿಗಣಿಸಲಾಗುತ್ತೆ.