ಬೆಂಗಳೂರು: ಶಾಲಾ ಶುಲ್ಕ ನಿಗದಿಗೆ ಸರ್ಕಾರ ಅಂತೂ ತೆರೆ ಎಳೆದಿದೆ. ಕಳೆದ ಸಾಲಿನ ಆಯಾ ಶಾಲೆಗಳ ಬೋಧನಾ ಶುಲ್ಕದ ಶೇ. 70ರಷ್ಟನ್ನು ಮಾತ್ರವೇ ಈ ವರ್ಷದ ಒಟ್ಟು ಶಾಲಾ ಶುಲ್ಕವನ್ನಾಗಿ ಪಡೆಯಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸೂಚಿಸಿದ್ದಾರೆ.
ಶಾಲಾ ಶುಲ್ಕ ನಿಗದಿ ಕುರಿತ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿ ಮಾತನಾಡಿದ ಅವರು, ಈ ನಿರ್ಧಾರಕ್ಕೆ ಬರುವ ಮುಂಚೆ ಹಲವಾರು ಸುತ್ತು ಶಾಲಾ ಶಿಕ್ಷಣದ ಪಾಲುದಾರರೆಲ್ಲರೊಂದಿಗೆ ಚರ್ಚಿಸಿ ಕೊನೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶುಲ್ಕ ನಿಗದಿ ತೀರ್ಮಾನಕ್ಕೆ ಬರಲಾಗಿದೆ. ಈ ಸಾಲಿಗೆ ಸಿಮೀತಗೊಂಡಂತೆ ರಾಜ್ಯದಲ್ಲಿರುವ ಯಾವುದೇ ಮಾದರಿಯ ಪಠ್ಯಕ್ರಮವನ್ನು ಬೋಧಿಸುವ ಖಾಸಗಿ ಶಾಲೆಗಳು 2019-20ನೇ ಸಾಲಿನ ಬೋಧನಾ ಶುಲ್ಕದ ಶೇ. 70ರಷ್ಟು ಭಾಗವನ್ನು ಮಾತ್ರ ಪೋಷಕರಿಂದ ಈ ಸಾಲಿನ ಒಟ್ಟು ಶುಲ್ಕವಾಗಿ ಪಡೆಯಬೇಕು.
ಈ ಬಾರಿ ಅವಧಿ ಶುಲ್ಕವನ್ನು ಹೊರತುಪಡಿಸಿ ಯಾವುದೇ ಅಭಿವೃದ್ಧಿ ಶುಲ್ಕಗಳನ್ನು ಶಾಲೆಗಳು ಪಡೆಯುವಂತಿಲ್ಲ. ವಿವಿಧ ಟ್ರಸ್ಟ್ಗಳಿಂದ ಯಾವುದೇ ವಂತಿಕೆ ಪಡೆಯುವಂತಿಲ್ಲ. 2020-21ನೇ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ಮೇಲೆ ತಿಳಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಪಡೆದಿದ್ದಲ್ಲಿ 2021-22ನೇ ಸಾಲಿನಲ್ಲಿ ಪಾವತಿಸಬೇಕಾದ ಶುಲ್ಕಕ್ಕೆ ಹೊಂದಾಣಿಕೆಯನ್ನು ಮಾಡಿಕೊಳ್ಳಬಹುದು. ಯಾವುದೇ ಶಿಕ್ಷಣ ಸಂಸ್ಥೆ ಮೇಲೆ ತಿಳಿಸಿರುವ ಶುಲ್ಕಕ್ಕಿಂತ ಕಡಿಮೆ ಶುಲ್ಕವನ್ನು ವಿಧಿಸಲು ಇಚ್ಛಿಸಿದಲ್ಲಿ ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ.
ಶುಲ್ಕವನ್ನು ಎರಡು ಕಂತುಗಳಲ್ಲಿ ಪಾವತಿಸಲು ಸಹ ಪೋಷಕರಿಗೆ ಅವಕಾಶವನ್ನು ಕಲ್ಪಿಸಬೇಕು. ಶುಲ್ಕ ರಿಯಾಯಿತಿ ಕುರಿತಂತೆ ಪೋಷಕರು/ಶಾಲೆಗಳು ಯಾವುದೇ ತಕರಾರು ಹೊಂದಿದ್ದಲ್ಲಿ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಯುಕ್ತ ಸಮಿತಿ ರಚಿಸಿ ಅದರ ಮೂಲಕ ಇಂತಹ ದೂರು ಪ್ರಕರಣಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.