ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಪರಿಣಾಮ ಕರ್ನಾಟಕದ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಲಿದೆ. ಮುಂಜಾಗ್ರತ ಕ್ರಮವಾಗಿ ಉಡುಪಿ, ದ.ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಇಂದು ಮತ್ತೆ ನಾಳೆ ಮಳೆಯ ಅಬ್ಬರ ಜೋರಾಗಲಿದ್ದು, ಜುಲೈ 26, 27, 28 ರಂದು ಮಳೆ ಪ್ರಮಾಣ ತಗ್ಗಲಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಲಿದ್ದು, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಬಳ್ಳಾರಿ, ಬೀದರ್, ಕಲಬುರಗಿ, ರಾಯಚೂರು ಹಾಗೂ ಚಿತ್ರದುರ್ಗದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇರುವುದರಿಂದ ಈ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಉತ್ತರ ಒಳನಾಡಿನಲ್ಲಿ ಜುಲೈ 25 ರಿಂದ ಮಳೆಯಾಗುವ ಸಾಧ್ಯತೆಯಿದ್ದು, ಬೆಂಗಳೂರಿನಲ್ಲಿಯೂ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮೀನುಗಾರರಿಗೆ ಎಚ್ಚರಿಕೆ:
ಕರಾವಳಿ ಭಾಗದಲ್ಲಿ ಪ್ರತೀ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಜುಲೈ 24 ಹಾಗೂ 25 ರಂದು ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು, ಮಾನ್ಸೂನ್ ಚುರುಕಾಗಿದೆ. ಉತ್ತರ, ದಕ್ಷಿಣ ಒಳನಾಡು ಹಾಗೂ ಕರಾವಳಿಯ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಿದೆ. ಯಲಬುರ್ಗ, ಕೊಪ್ಪಳ ಜಿಲ್ಲೆಯಲ್ಲಿ 12 ಸೆಂ.ಮೀ, ತುಮಕೂರು 9 ಸೆಂ.ಮೀ, ಹುನಗುಂದ ಬಾಗಲಕೋಟೆ ಜಿಲ್ಲೆಯಲ್ಲಿ 6 ಸೆಂ.ಮೀ, ಮಂಗಳೂರಿನಲ್ಲಿ 5 ಸೆಂ.ಮೀ, ಚಿಕ್ಕಬಳ್ಳಾಪುರದಲ್ಲಿ 6 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕರು ವಿವರಿಸಿದ್ದಾರೆ.