ಬೆಂಗಳೂರು: ಲಾಕ್‌ಡೌನ್ ಸಡಿಲಿಸಿರುವ ಸರ್ಕಾರ ಕೈಗಾರಿಕೆಗಳ ಪುನಾರಂಭಕ್ಕೆ ಅನುಮತಿ ನೀಡಿದೆ. ಆದರೆ ನಗರದ ಬೆಳ್ಳಂದೂರು ಕೆರೆ, ವರ್ತೂರು ಕೆರೆ ಹಾಗೂ ವೃಷಭಾವತಿ ನದಿ ಸುತ್ತಲಿನ ಕೈಗಾರಿಕೆಗಳ ಆರಂಭಕ್ಕೆ ಅನುಮತಿ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಕೀಲೆ ಗೀತಾ ಮಿಶ್ರಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಲಾಕ್‌ಡೌನ್ ಗೆ ಮೊದಲು ನಗರದ ಜಲಮೂಲಗಳನ್ನು ಕಲುಷಿತಗೊಳಿಸಿರುವ ಆರೋಪ ಹೊತ್ತಿರುವ ವರ್ತೂರು, ಬೆಳ್ಳಂದೂರು ಹಾಗೂ ವೃಷಭಾವತಿ ನದಿ ಪಾತ್ರಗಳಲ್ಲಿ ಇರುವ ಕೈಗಾರಿಕೆಗಳ ಪುನಾರಂಭಕ್ಕೆ ಅನುಮತಿ ನೀಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ನಗರದ ವಕೀಲೆ ಗೀತಾ ಮಿಶ್ರಾ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಬಿಡಿಎ, ಬೆಂಗಳೂರು ಜಲಮಂಡಳಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ: ಅರ್ಜಿಯಲ್ಲಿ, ಲಾಕ್‌ಡೌನ್ ಘೋಷಣೆಯ ಬಳಿಕ ವಾಣಿಜ್ಯ ಹಾಗೂ ಕೈಗಾರಿಕಾ ಚಟುವಟಿಕೆ ಸ್ಥಗಿತಗೊಂಡಿದ್ದು, ನಗರದ ಕೆರೆಗಳು, ಅದರಲ್ಲೂ ಅತಿ ಹೆಚ್ಚು ಮಲಿನಗೊಂಡಿದ್ದ ಬೆಳ್ಳಂದೂರು ಕೆರೆ, ವರ್ತೂರು ಕೆರೆ ಹಾಗೂ ವೃಷಭಾವತಿ ನದಿ ಬಹುತೇಕ ಸ್ವಚ್ಛಗೊಂಡಿವೆ. ಇದೀಗ ಈ ಕೆರೆಗಳ ಸುತ್ತಲಿನ ಕಾರ್ಖಾನೆಗಳ ಕಾರ್ಯಾರಂಭಕ್ಕೆ ಅನುಮತಿ ನೀಡಿದರೆ ಮತ್ತೆ ಅವು ಮಲಿನಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಅಲ್ಲದೆ, ಸಂಬಂಧಪಟ್ಟ ಪ್ರಾಧಿಕಾರಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರ್ಖಾನೆಗಳಿಂದ ಯಾವುದೇ ರೀತಿಯ ತ್ಯಾಜ್ಯ ಜಲ ಮೂಲಗಳಿಗೆ ನೇರವಾಗಿ ಸೇರುವುದಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಕೆರೆಗಳು ಸೇರಿದಂತೆ ಜಲ ಮೂಲಗಳ ಸಂರಕ್ಷಣೆ ಸಂಬಂಧ ಸುಪ್ರೀಂಕೋರ್ಟ್, ಹೈಕೋರ್ಟ್ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹೊರಡಿಸಿರುವ ನಿರ್ದೇಶನಗಳ ಅನುಸಾರ ಕ್ರಮ ಕೈಗೊಳ್ಳುವಂತೆ ಏ.23ರಂದು ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಅದೇ ರೀತಿ ತಾವೀಗ ಸಲ್ಲಿಸುವ ಅರ್ಜಿ ಇತ್ಯರ್ಥವಾಗುವವರೆಗೆ ಬಿಬಿಎಂಪಿ ವ್ಯಾಪ್ತಿಯ ಬೆಳ್ಳಂದೂರು ಕೆರೆ, ವರ್ತೂರು ಕೆರೆ ಹಾಗೂ ವೃಷಭಾವತಿ ಪ್ರದೇಶಗಳಲ್ಲಿ ಕೈಗಾರಿಕಾ ಚಟುವಟಿಕೆ ಪುನಾರಂಭಕ್ಕೆ ಅನುಮತಿ ನೀಡದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.