ಬೆಂಗಳೂರು: ದುಬಾರಿ ದಂಡ ವಿಧಿಸುವ ವಿಧೇಯಕ ಮತ್ತು ಐಎಂವಿ ಕಾಯಿದೆ ತಿದ್ದುಪಡಿ ವಿರೋಧಿಸಿ ಆಟೋ ಚಾಲಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಅವೈಜ್ಞಾನಿಕ ದುಬಾರಿ ದಂಡ, ಕೇಂದ್ರ ಮೋಟಾರ್ ವಾಹನ ಮಸೂದೆ 2019 ತಿದ್ದುಪಡಿ ವಾಪಸ್ ಪಡೆಯುವಂತೆ ಒತ್ತಾಯಿಸಿದರು. ಬೆಂಗಳೂರು ನಗರವೊಂದರಲ್ಲೇ 82 ಲಕ್ಷ ವಾಹನಗಳು ನೊಂದಾಣಿಯಾಗಿದ್ದು, ಈ ವಾಹನಗಳು ಸಂಚಾರ ಮಾಡಲು ರಸ್ತೆಗಳು ವಿಸ್ತಾರವಾಗಿಲ್ಲ. ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಅವೈಜ್ಞಾನಿಕ ಸಂಚಾರ ವ್ಯವಸ್ಥೆ ಮಾಡಲಾಗಿದೆ. ವಿವಿಧ ಕಾಮಗಾರಿಗಳಿಂದಾಗಿ ವಾಹನಗಳ ವೇಗದ ಮಿತಿ ಗಂಟೆಗೆ 15-20 ಕಿ.ಮೀ. ಕುಸಿದಿದ್ದು, ಇದರಿಂದ ಚಾಲಕರು ಹೈರಾಣಾಗಿದ್ದಾರೆ.
ಹೀಗಿರುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚಾಲಕರ ಮೇಲೆ ದಂಡ ಹೆಚ್ಚಳ ಆದೇಶಿಸಿದೆ. ಈಗಾಗಲೇ ಸಂಪಾದನೆ ಇಲ್ಲದೇ ಚಾಲಕರು ನಿತ್ಯ ಜೀವನ ನಡೆಸಲು ಪರದಾಡುತ್ತಿದ್ದಾರೆ. ಹಾಗಾಗಿ ಕೂಡಲೇ ಐಎಂವಿ ಕಾಯ್ದೆ ವಾಪಸ್ಸಾಗಬೇಕು. ಇನ್ನು ಈ ಕಾಯ್ದೆ ಜಾರಿ ಮಾಡಿರುವ ಉದ್ದೇಶ ಆಟೋ ಇಂಡಸ್ಟ್ರಿಯಲ್ ಮಾಲೀಕರ ಲಾಬಿಗೆ ಮಣಿದು, ಅವರಿಗೆ ಲಾಭ ಮಾಡಿಕೊಡುವ ಉದ್ದೇಶವಿದೆ ಎಂದು ಆರೋಪಿಸಿದರು.
ಈ ಕಾಯಿದೆ ವಾಪಸಾತಿ ಜೊತೆಗೆ, 15 ವರ್ಷಗಳ ಹಳೆಯ ಆಟೋಗಳನ್ನು ರದ್ದುಪಡಿಸುತ್ತಿರುವುದರಿಂದ ಹಳೆ ಆಟೋಗಳಿಗೆ ಕಂಪನಿಗಳಿಂದ ದರ ನಿಗದಿಪಡಿಸಬೇಕು. ಆಟೋ ಚಾಲಕರಿಗೆ ವಸತಿ ಕಲ್ಪಿಸಬೇಕು. ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಸಾಲ ಸೌಲಭ್ಯದ ನೆರವು ನೀಡಬೇಕು. ಚಾಲಕರಿಗೆ ಚಾಲನಾ ಪತ್ರ ನೀಡುವಾಗ ವಿದ್ಯಾಹರ್ತೆ ಕಡ್ಡಾಯಕ್ಕೆ ವಿರೋಧ, ವಾಹನಗಳ ಇನ್ಸುರೆನ್ಸ್ ಪ್ರೀಮಿಯಂ ದರ ಏರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.