ಬೆಂಗಳೂರು: ರೈತರ ಸಾಲಮನ್ನಾ ಯೋಜನೆಯನ್ನು ಅಧಿಕಾರಿಗಳು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ಆದರೆ, ಸುಮ್ಮನೆ ರಾಜ್ಯ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್ಗಳ ಸಮಸ್ಯೆಯಿಂದ ನಮಗೆ ಕೆಟ್ಟ ಹೆಸರು ಬರುತ್ತಿದೆ. ಒಂದೇ ಕಂತಿನಲ್ಲಿ ಸಾಲ ಮನ್ನಾ ಹಣ ಬಿಡುಗಡೆಗೆ ಮಂಗಳವಾರ ಆದೇಶ ಹೊರಡಿಸಿದ್ದೇನೆ. ರೈತರ ಸಾಲ ಮನ್ನಾ ಫಲಾನುಭವಿಗಳನ್ನು ಗುರುತಿಸಿ ಪಾರದರ್ಶಕ ಕೆಲಸ ಮಾಡಿದ್ದೀರಿ. ಯಾವುದೇ ಮಧ್ಯವರ್ತಿಗಳಿಗೆ ಆ ಹಣ ಹೋಗದಂತೆ ರೈತರ ಅಕೌಂಟ್ಗೆ ಹಣ ಜಮಾವಣೆ ಮಾಡಿದ್ದೀರಿ. ಅಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಸರ್ಕಾರ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದು, ಈ ಬಗ್ಗೆ ಮಾಧ್ಯಮಗಳು ಮುಕ್ತವಾಗಿ ಚರ್ಚೆ ಮಾಡಬೇಕು. ಒಂದು ವರ್ಷದಿಂದ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ ಎಂದು ಸಿಎಂ ಹೇಳಿದರು. ದೇವರ ದಯದಿಂದ ಮಳೆ ಆಗ್ತಿದೆ ಅನ್ನೋ ಮಾಹಿತಿ ಬಂದಿದೆ. ಐದಾರು ತಿಂಗಳಲ್ಲಿ ಮೇವು ಮತ್ತು ನೀರಿನ ಕೊರತೆ ಕಾಣುತ್ತಿದ್ದೇವೆ. ಟ್ಯಾಂಕರ್ನಲ್ಲಿ ನೀರು ಕೊಡಿಸುವ ಕೆಲಸ, ಖಾಸಗಿ ಬೋರ್ವೆಲ್ ಮೂಲಕ ನೀರು ಸರಬರಾಜು ಮಾಡಿದ್ದೇವೆ. ಈ ಬಗ್ಗೆ ಪ್ರತಿಪಕ್ಷದವರ ಪಕ್ಷದ ಟೀಕೆ, ಟಿಪ್ಪಣಿ ನೋಡಿದ್ದೇನೆ. ಹೊರ ನೋಟಕ್ಕೆ ಪ್ರತಿಪಕ್ಷಗಳು ಟೀಕೆ ಮಾಡ್ತಿವೆ ಅಷ್ಟೇ ಎಂದು ಸಿಎಂ ಕಿಡಿಕಾರಿದರು.
ಪ್ರತಿಪಕ್ಷಗಳ ಪಕ್ಷಗಳ ಟೀಕೆ ಟಿಪ್ಪಣಿ ಕೂಡ ನನಗೆ ಗೊತ್ತಿದೆ. ಸಮರ್ಪಕವಾಗಿ ಕೆಲಸ ಆಗಿಲ್ಲ ಅನ್ನುವ ಚರ್ಚೆಯನ್ನು ನಾನು ಗಮನಿಸಿದ್ದೇನೆ. ಬಿತ್ತನೆ ಬೀಜ ವಿತರಣೆಗೆ ಅಧಿಕಾರಿಗಳು ಎಲ್ಲಾ ಕ್ರಮ ಕೈಗೊಂಡಿದ್ದೀರಿ ಅಂತಾ ಭಾವಿಸಿದ್ದೇನೆ. ಕೃಷಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಇದೇ ವೇಳೆ ಸೂಚನೆ ನೀಡಿದರು.
ನಾನು ಗ್ರಾಮ ವಾಸ್ತವ್ಯ ಮಾಡುವ ವೇಳೆ ಜನರ ಸಮಸ್ಯೆಗಳು ನಿವಾರಣೆ ಆಗಬೇಕು. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದ ಸಿಎಂ ಕುಮಾರಸ್ವಾಮಿ ಅವರು, ಜನರ ಮಧ್ಯೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ ಎಂದು ಹೇಳಿದರು. ಈ ಬಾರಿ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಬೆಳಗ್ಗೆ 10 ಗಂಟೆಗೆ ನಾನು ಗ್ರಾಮ ವಾಸ್ತವ್ಯ ಪ್ರಾರಂಭಿಸುತ್ತೇನೆ. ಸ್ಥಳದಲ್ಲೇ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಹೊಸ ರೂಪದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ ಎಂದರು.