ಬೆಂಗಳೂರು: ದಿನದ ಕಾರ್ಯಸೂಚಿಯಲ್ಲಿ ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ಚರ್ಚೆ ಇಲ್ಲದಿರುವ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಪೀಠಕ್ಕೆ ತಾವು ಸಲ್ಲಿಸಿದ ನಿಲುವಳಿ ಸೂಚನೆ ಕುರಿತ ಪ್ರಾಥಮಿಕ ಚರ್ಚೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು ಹಿಡಿದರು.
ಸಂತಾಪ ಸೂಚನಾ ನಿರ್ಣಯ ಪೂರ್ಣಗೊಂಡ ನಂತರ ಕಾರ್ಯದರ್ಶಿಗಳ ವರದಿ ಹಾಗೂ ವಿವಿಧ ಸಮಿತಿಗಳ ವರದಿ ಮಂಡನೆಯ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ನೀಡಿರುವ ನಿಲುವಳಿ ಸೂಚನೆಯನ್ನು ಕೈಗೆತ್ತಿಕೊಳ್ಳುವುದಾಗಿ ಸಭಾಧ್ಯಕ್ಷರು ಹೇಳಿದರು. ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ನಂತರ ನಿಯಮ 60ರಂತೆ ಸಾರ್ವಜನಿಕ ಮಹತ್ವದ ವಿಚಾರದ ಚರ್ಚೆಗೆ ನಿಯಮಾವಳಿಗಳಲ್ಲಿ ಅವಕಾಶವಿದೆ ಎಂಬುದನ್ನು ಸಿದ್ದರಾಮಯ್ಯ ಉಲ್ಲೇಖಿಸಿದರು. ದಿನದ ಕಾರ್ಯಸೂಚಿಯಲ್ಲಿ ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ಚರ್ಚೆ ಇಲ್ಲದಿರುವ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಪೀಠಕ್ಕೆ ತಾವು ಸಲ್ಲಿಸಿದ ನಿಲುವಳಿ ಸೂಚನೆ ಕುರಿತ ಪ್ರಾಥಮಿಕ ಚರ್ಚೆಗೆ ಪಟ್ಟು ಹಿಡಿದರು. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಧ್ಯಪ್ರವೇಶಿಸಿ ಚರ್ಚೆಗೆ ತಾವು ಸಿದ್ಧ ಎಂದು ಭರವಸೆ ನೀಡಿದರೂ ಪ್ರತಿಪಕ್ಷದವರು ಮುಖ್ಯಮಂತ್ರಿಯವರ ಮನವಿಯನ್ನು ಪುರಸ್ಕರಿಸಲಿಲ್ಲ.
ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿಯವರಿಂದ - ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸಿದರು. ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ ಅಧ್ಯಕ್ಷ ಅರಗ ಜ್ಞಾನೇಂದ್ರ ಅವರು 2018-19ನೇ ಸಾಲಿನ ಸಮಿತಿಯ 28ನೇ ವರದಿಯನ್ನು ಒಪ್ಪಿಸಿದರು.
ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎಸ್.ಅಂಗಾರ ಅವರು ಸಮಿತಿಯ ಎರಡನೇ ವರದಿಯನ್ನು ಸದನಕ್ಕೆ ಒಪ್ಪಿಸಿದರು. ನಂತರ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ 2017-18ನೇ ಸಾಲಿನ ಧನ ವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳನ್ನು ಸಭೆಯ ಮುಂದಿಟ್ಟರು. ಅಲ್ಲದೆ, ಮಾರ್ಚ್ 2018ಕ್ಕೆ ಅಂತ್ಯಗೊಂಡ ರಾಜ ಸ್ವವಲಯದ ಮೇಲಿನ ವರದಿ ಹಾಗೂ ಆರ್ಥಿಕ ವಲಯದ ಮೇಲಿನ ವರದಿಗಳನ್ನು ಸಭೆಯ ಮುಂದಿಟ್ಟರು. ನಂತರ ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ, ಡಾ. ಸಿ.ಎನ್.ಅಶ್ವತ್ಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಒಳಗೊಂಡಂತೆ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟ ಸಹೋದ್ಯೋಗಿಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ವಿತ್ತೀಯ ಕಾರ್ಯಕಲಾಪಗಳಲ್ಲಿನ ಪ್ರಸಕ್ತ ಸಾಲಿನ ಅನುದಾನದ ಬೇಡಿಕೆಗಳನ್ನು ಮಂಡಿಸಿದರು.
ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರಾಗಿ ಹಾಗೂ ಸರ್ಕಾರದ ಸಚೇತಕರಾಗಿ ಶಾಸಕ ವಿ.ಸುನೀಲ್ ಕುಮಾರ್ ಅವರನ್ನು ಮಾನ್ಯ ಮಾಡಿರುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕೃತವಾಗಿ ಪ್ರಕಟಿಸಿದರು.