ಬೆಂಗಳೂರು: ನನ್ನದೇ ಬರ್ತ್ ಸರ್ಟಿಫಿಕೆಟ್ ಇಲ್ಲ ಅಂದ್ಮೇಲೆ ನಮ್ಮಪ್ಪಂದು, ಅಮ್ಮಂದು ಎಲ್ಲಿಂದ ತರಲಿ.? ಇದೆಲ್ಲ ಆಗುವ ಕೆಲಸ ಅಲ್ಲ ಎನ್ನುವ ಮೂಲಕ ಸಿಎಎ, ಎನ್ಆರ್ಸಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ದಲಿತ ಸಂಘರ್ಷ ಸಮಿತಿಯು ಗಾಂಧಿ ಭವನದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದ ನಂತರ ಮಾತನಾಡಿದ ಅವರು, ನನ್ ಬರ್ತ್ ಸರ್ಟಿಫಿಕೆಟ್ ಇಲ್ಲ. ಶಾಲೆಯಲ್ಲಿ ಮೇಷ್ಟ್ರು ಹಾಕಿದ ದಿನಾಂಕವೇ ಅಂತಿಮವಾಯಿತು. ಅಂದ್ಮೇಲೆ ನಮ್ಮ ತಂದೆ-ತಾಯಿಯ ಬರ್ತ್ ಸರ್ಟಿಫಿಕೆಟ್ ಎಲ್ಲಿಂದ ತರಲು ಸಾಧ್ಯ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ರೂರಿಗಳು. ಒಬ್ಬ ಹಿಟ್ಲರ್ ಮಾತ್ರ ಈ ರೀತಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗದವರು ಎಲ್ಲಿಂದ ದಾಖಲೆ ತರ್ತಾರೆ..? ಹಿಟ್ಲರ್ ಕೂಡ ತನ್ನ ಕೊನೆಯ ದಿನದಲ್ಲಿ ಕ್ರೂರಿಯಾಗಿದ್ದ ಎಂದು ಮೋದಿಯನ್ನ ಸಿದ್ದರಾಮಯ್ಯ ಹಿಟ್ಲರ್ಗೆ ಹೋಲಿಕೆ ಮಾಡಿದರು.
ಜನರ ಮಧ್ಯೆ ಕುಳಿತು ಭಾಷಣ ಕೇಳಿದ ಸಿದ್ದರಾಮಯ್ಯ:
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಮಾವಳ್ಳಿ ಶಂಕರ್ ಮೊದಲಾದವರು ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತಿದ್ದರು. ಆದರೆ ಸಿದ್ದರಾಮಯ್ಯ ಮಾತ್ರ ಮಾಜಿ ಸಚಿವರಾದ ಜಮೀರ್ ಅಹಮದ್ ಖಾನ್, ಆಂಜನೇಯ ಜೊತೆ ಜನರ ಮಧ್ಯೆ ಕುಳಿತು ಭಾಷಣ ಕೇಳಿದರು.