ಬೆಂಗಳೂರು: ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಕೈ ಪಡೆಯಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದ್ದು, ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಿದೆ. ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ರಾಜ್ಯ ಹಿರಿಯ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಕೈ ಪಾಳಯದ 60 ಕ್ಕೂ ಹೆಚ್ಚು ನಾಯಕರನ್ನು ಒಬ್ಬೊಬ್ಬರಾಗಿ ಕರೆಸಿದ ಮಿಸ್ತ್ರಿ, ಪ್ರತಿಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಯಾರು ಸೂಕ್ತ ಎಂಬ ಮಾಹಿತಿ ಪಡೆದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಪ್ರತಿಪಕ್ಷ ನಾಯಕ ಸ್ಥಾನದ ಪ್ರಮುಖ ಆಕಾಂಕ್ಷಿಗಳಾದ್ದು, ಬಹುತೇಕ ನಾಯಕರು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಸುಮಾರು 30ಕ್ಕೂ ಹೆಚ್ಚು ಮಂದಿ ಸಿದ್ದರಾಮಯ್ಯ ವಿರೋಧಪಕ್ಷ ನಾಯಕನ ಸ್ಥಾನಕ್ಕೆ ಯೋಗ್ಯ ಎಂಬ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದ್ದು, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾದರೆ ಪಕ್ಷ ಬಲವರ್ಧನೆಯಾಗುತ್ತೆ ಎಂದಿದ್ದಾರೆ ಎನ್ನಲಾಗಿದೆ.
ಇತ್ತ ಮೂಲ ಕಾಂಗ್ರೆಸಿಗರು ಸಿದ್ದರಾಮಯ್ಯ ವಿರುದ್ಧ ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದು, ಕೆ.ಹೆಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಹೆಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್ ಮೂಲ ಕಾಂಗ್ರೆಸಿಗರಿಗೆ ವಿಪಕ್ಷ ನಾಯಕನ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಇನ್ನು ವರದಿಯೊಂದಿಗೆ ದೆಹಲಿಗೆ ತೆರಳಿರುವ ಮಧುಸೂದನ್ ಮಿಸ್ತ್ರಿ, ವರದಿಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ನೀಡಲಿದ್ದಾರೆ. ವರದಿ ಹಾಗೂ ಇತರ ಅಂಶಗಳ ಆದಾರದ ಮೇಲೆ ಅಧ್ಯಕ್ಷೆ ಸೋನಿಯಾ ಗಾಂಧಿ, ಗುಲಾಂ ನಬಿ ಆಜಾದ್ ಹಾಗೂ ಕೆ.ಸಿ.ವೇಣುಗೋಪಾಲ್ ಜತೆ ಚರ್ಚೆ ನಡೆಸಿ, ವಿರೋಧ ಪಕ್ಷದ ಸ್ಥಾನದ ಪಟ್ಟ ಯಾರಿಗೆ ನೀಡಬೇಕು ಎಂಬ ಬಗ್ಗೆ ನಿರ್ಧರಿಸಲಿದ್ದಾರೆ.