ಬೆಂಗಳೂರು: ಆಪರೇಷನ್ ಕಮಲದಲ್ಲಿ ಹಣದ ಆಮಿಷ ಒಡ್ಡಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿಯಿಂದ ಶ್ರೀನಿವಾಸ ಗೌಡಗೆ ನೋಟಿಸ್ ಜಾರಿಯಾಗಿದೆ.
ಶ್ರೀನಿವಾಸ ಗೌಡ ವಿಚಾರಣೆಗೆ ಹಾಜರಾಗಿ ಮಾಹಿತಿಯನ್ನ ನೀಡುವಂತೆ ಎಸಿಬಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇನ್ನು ನೋಟಿಸ್ನಲ್ಲಿ ಒಂದು ವೇಳೆ ಉತ್ತರಿಸದೆ ಇದ್ದಲ್ಲಿ ಕೇಸ್ ರಿಜಿಸ್ಟರ್ ಆಗುತ್ತದೆ. ಜೊತೆಗೆ ಭಾರಿ ಹಣದ ಬಗ್ಗೆ ಮಾಹಿತಿ ನೀಡಲೇಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ. ಅದರಲ್ಲೂ ಇಂದು ಬೆಳಗ್ಗೆ 11 ಗಂಟೆಯ ಒಳಗೆಯೇ ಎಸಿಬಿ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಏನಿದು ಪ್ರಕರಣ:
ಶ್ರೀನಿವಾಸ ಗೌಡ ವಿರುದ್ಧ ಎಸಿಬಿಗೆ ರವಿಕೃಷ್ಣಾ ರೆಡ್ಡಿ ದೂರು ನೀಡಿದ್ರು. ದೂರಿನಲ್ಲಿ ಈ ಹಿಂದೆ ತನಗೆ ಬಿಜೆಪಿ 30 ಕೋಟಿ ಆಫರ್ ನೀಡಿತ್ತು. ಜೆಡಿಎಸ್ ಬಿಟ್ಟು ಬಿಜೆಪಿ ಸೇರಲು ಮುಂಗಡವಾಗಿ 5 ಕೋಟಿ ನೀಡಿದ್ದರು. ಇನ್ನುಳಿದ 25 ಕೋಟಿ ಹಣವನ್ನ ನೀಡುತ್ತೇವೆ ಎಂದಿದ್ದರು, ಆದ್ರೆ ಕೊಡಲಿಲ್ಲ. ಅನಂತರ ಜೆಡಿಎಸ್ನಿಂದಲೂ ಪಕ್ಷ ಬಿಡುವಂತೆ ಒತ್ತಾಯಿಸಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ ಗೌಡ ಹೇಳಿಕೊಂಡಿದ್ದರು. ಇನ್ನು ಇದಕ್ಕೆ ಪ್ರತ್ಯುತ್ತರವೆಂಬಂತೆ ರವಿಕೃಷ್ಣಾ ರೆಡ್ಡಿಯೇ ಶ್ರೀನಿವಾಸ ಗೌಡ ವಿರುದ್ಧ ಎಸಿಬಿಗೆ ದೂರು ನೀಡಿದ್ದರು. ಒಂದು ವೇಳೆ ಮುಂಗಡವಾಗಿ 5 ಕೋಟಿ ರೂ. ಕೊಟ್ಟಿದ್ದರೆ ಅಷ್ಟು ದೊಡ್ಡ ಮೊತ್ತವನ್ನು ಮನೆಯಲ್ಲಿಡಲು ಹೇಗೆ ಸಾಧ್ಯ?. 2 ಲಕ್ಷಕ್ಕಿಂತ ಹೆಚ್ಚು ಹಣವನ್ನ ಮನೆಯಲ್ಲಿಡೋದು ನಿಯಮ ಬಾಹಿರವಾಗಿದ್ದು, ಶ್ರೀನಿವಾಸಗೌಡ ವಿರುದ್ಧ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ರು.