ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಮೊದಲ ಸಂಪುಟ ವಿಸ್ತರಣೆಯಾಗಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದ್ದು, ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ಶುಭ ಕೋರಿದ್ದಾರೆ.
2019ರ ಜುಲೈ 26 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದ್ದರು. ಒನ್ ಮ್ಯಾನ್ ಕ್ಯಾಬಿನೆಟ್ ಮೂಲಕ ಅಧಿಕಾರ ಆರಂಭಿಸಿ, ಹೈಕಮಾಂಡ್ ಜತೆ ಹಗ್ಗ ಜಗ್ಗಾಟ ನಡೆಸಿ ಆಗಸ್ಟ್ 20 ರಂದು ಮೊದಲ ಸಂಪುಟ ವಿಸ್ತರಣೆ ಮಾಡುವ ಮೂಲಕ 17 ಸದಸ್ಯರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು.
ಇಂದಿಗೆ ಸರಿಯಾಗಿ ಮೊದಲ ಸಂಪುಟ ವಿಸ್ತರಣೆಯಾಗಿ ಒಂದು ವರ್ಷ ಪೂರ್ಣಗೊಂಡಿದೆ. ಈ ಕ್ಷಣವನ್ನು ಸಂಪುಟ ಸಹೋದ್ಯೋಗಿಗಳು ಸ್ಮರಿಸಿಕೊಳ್ಳುತ್ತಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ದರಾಗಿ ಎಂದು ಸಿಎಂ ಕರೆ ಮಾಡಿ ಮಾಹಿತಿ ನೀಡಿದ್ದನ್ನು ಸ್ಮರಿಸಿಕೊಂಡು, ಫೇಸ್ಬುಕ್ನಲ್ಲಿ ತಮ್ಮ ಸಂತಸದ ಕ್ಷಣಕ್ಕೆ ಒಂದು ವರ್ಷವಾಯಿತು ಎಂದು ಬರೆದುಕೊಂಡಿದ್ದಾರೆ.
ಇನ್ನು ಸಚಿವ ಸಂಪುಟ ಸಭೆಯಲ್ಲಿ ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ಶುಭ ಕೋರಿದ್ದಾರೆ. ಮತ್ತಷ್ಟು ಉತ್ತಮವಾಗಿ ಕೆಲಸ ಮಾಡುವಂತೆ ಹಾರೈಸಿದ್ದಾರೆ.