ಆನೇಕಲ್ (ಬೆಂಗಳೂರು): ಶ್ರೀಗಂಧದ ಮರ ಕಡಿಯುತ್ತಿದ್ದ ಸಂದರ್ಭದಲ್ಲಿ ತಡೆಯಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದು, ಒಬ್ಬ ಮೃತಪಟ್ಟು, ಮತ್ತೋರ್ವ ಸ್ಥಳದಿಂದ ಪರಾರಿಯಾದ ಘಟನೆ ಮಂಗಳವಾರ ತಡರಾತ್ರಿ 1.15ರ ಸುಮಾರಿಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕಲ್ಕೆರೆ ಅರಣ್ಯ ವಲಯದಲ್ಲಿ ನಡೆದಿದೆ. ಮೃತಪಟ್ಟ ಆರೋಪಿಯು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿ ಹೋಬಳಿ ನಟುವರಹಳ್ಳಿಯ ಮುನಿರಾಜು (38) ಎಂಬಾತನಾಗಿದ್ದು, ಈತ ಪಿಒಪಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಬನ್ನೇರುಘಟ್ಟ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಗಸ್ತು ತಿರುಗುತ್ತಿದ್ದಾಗ ಶ್ರೀಗಂಧದ ಮರ ಕಡಿಯುತ್ತಿರುವ ಬಗ್ಗೆ ಶಬ್ದ ಕೇಳಿಸಿದ್ದು, ಸ್ಥಳಕ್ಕೆ ತೆರಳಿದ್ದಾರೆ. ಆಗ ಅರಣ್ಯ ಕಾವಲುಗಾರರ ಮೇಲೆ ಶ್ರೀಗಂಧ ಕಳ್ಳತನದ ಇಬ್ಬರು ಆರೋಪಿಗಳು ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಸಿಬ್ಬಂದಿ ಎಚ್ಚರಿಕೆ ನೀಡಿ ಒಮ್ಮೆ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಆಗಲೂ ಸಹ ಮಾತು ಕೇಳದ ಕಾರಣ ಒಬ್ಬನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದಾಗಿ ಮುನಿರಾಜು ಗಾಯಗೊಂಡು ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದು, ಮತ್ತೋರ್ವ ಕಾಡಿನ ಕತ್ತಲಲ್ಲಿ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಹೇಳಿದ್ದಿಷ್ಟು: ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ''ಬನ್ನೇರುಘಟ್ಟ ಸಂರಕ್ಷಿತ ಅರಣ್ಯದಲ್ಲಿ ವನ್ಯ ಜೀವಿಗಳೊಂದಿಗೆ ಯಥೇಚ್ಛವಾಗಿ ಶ್ರೀಗಂಧದ ಮರಗಳಿವೆ. ಸಲಕರಣೆ ಸಮೇತ ಇಬ್ಬರು ಕಾಡಿಗಿಳಿದು ಶ್ರೀಗಂಧದ ಮರ ಕಡಿಯುತ್ತಿದ್ದರು. ಆಗ ಕಾಡಿನ ಗಸ್ತಿನಲ್ಲಿದ್ದ ಇಬ್ಬರು ಕಾವಲುಗಾರರಿಗೆ ಮರ ಕಡಿಯುವ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದಾಗ ಇಬ್ಬರು ಆರೋಪಿಗಳು ಕಂಡು ಬಂದಿದ್ದಾರೆ. ಶರಣಾಗುವಂತೆ ಆರೋಪಿಗಳಿಗೆ ಎಚ್ಚರಿಸಿದರೂ ಅರಣ್ಯ ಸಿಬ್ಬಂದಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಆಗ ಎಚ್ಚರಿಕೆ ನೀಡಿ ಗಾಳಿಯಲ್ಲಿ ಫೈರಿಂಗ್ ಮಾಡಿದ್ದು, ಆಗಲೂ ಮಾತು ಕೇಳದಾಗ ಆರೋಪಿಗಳ ಮೇಲೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಇದರಿಂದ ಓರ್ವ ಸ್ಥಳದಲ್ಲೇ ಮೃತನಾಗಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ'' ಎಂದು ತಿಳಿಸಿದ್ದಾರೆ.
''ಆರೋಪಿಗಳು ಕಾಂಪೌಂಡ್ ಹಾರಿ ಬಂದು ಕೃತ್ಯದಲ್ಲಿ ತೊಡಗಿರುವ ಶಂಕೆ ಇದೆ. ಈ ಹಿಂದೆ ಕೂಡ ಕಳ್ಳತನಕ್ಕೆ ಯತ್ನಿಸಿದ್ದರಾ ಎಂಬ ಬಗ್ಗೆ ತನಿಖೆ ನಡೆಯಲಿದೆ. ಈಗಾಗಲೇ ಸ್ಥಳಕ್ಕೆ ಬೆರಳಚ್ಚು ತಜ್ಞರು, ಸೋಕೋ ತಂಡ, ಎಫ್ಎಸ್ಎಲ್ ತಂಡ ಹಾಜರಿದ್ದು, ಪರಿಶೀಲನೆ ಹಾಗೂ ಸಾಕ್ಷಿಗಳ ಕಲೆಹಾಕುವಲ್ಲಿ ನಿರತರಾಗಿದ್ದಾರೆ'' ಎಂದು ಎಸ್ಪಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿ ಮಚ್ಚು, ಮರ ಕಡಿಯುವ ಗರಗಸ ಸೇರಿ ಕೆಲ ಯಂತ್ರಗಳು, ಮಾರಕಾಸ್ತ್ರಗಳು ಕಂಡು ಬಂದಿದ್ದು, ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಅರಣ್ಯ ಇಲಾಖೆ ಅಧಿಕಾರಿಗಳು ಡಿವೈಎಸ್ಪಿ ಲಕ್ಷ್ಮಿನಾರಾಯಣ್, ಅರಣ್ಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಭೇಟಿ: ಘಟನಾ ಸ್ಥಳಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ''ಆರೋಪಿಗಳು ಶ್ರೀಗಂಧದ ಮರ ಕಳ್ಳತನ ಮಾಡುವ ದುರುದ್ದೇಶದಿಂದಲೇ ಕಾಂಪೌಂಡ್ ಜಿಗಿದು ಕಾಡಿಗೆ ಬಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕಳ್ಳರು ಆಯುಧಗಳೊಂದಿಗೆ ಬಂದಿರುವುದು ಪತ್ತೆಯಾಗಿದೆ. ಕಾನೂನು ಪ್ರಕಾರ ತನಿಖೆ ಮುಂದುವರೆಯಲಿದೆ. ಹಿರಿಯ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ'' ಎಂದು ಜಿಲ್ಲಾಧಿಕಾರಿ ದಯಾನಂದ್ ತಿಳಿಸಿದ್ದಾರೆ.