ಬೆಂಗಳೂರು: ಮಾದಕ ವಸ್ತು ಮಾರಾಟದ ಜಾಲ ಪತ್ತೆ ಮಾಡಲು ಮುಂದಾಗಿರುವ ಬೆಂಗಳೂರು ಪೊಲೀಸರು ಕಟ್ಟೆಚ್ಚರ ವಹಿಸಿ ಪರಿಶೀಲನೆಗೆ ಇಳಿದಿದ್ದಾರೆ. ಇದೀಗ ಪೊಲೀಸರ ಕಣ್ತಪ್ಪಿಸಿ ಹೆಲ್ಮೆಟ್ ಒಳಗೆ ಬ್ರೌನ್ ಶುಗರ್ ಮಾರಾಟಕ್ಕೆ ಮುಂದಾಗಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ನೊಲ್ ಪೇಟೆಯ ಮಹಾವೀರ ಹೌಸ್ ಹತ್ತಿರ ಅಪರಿಚಿತ ವ್ಯಕ್ತಿ ಬ್ರೌನ್ ಶುಗರ್ ಮಾರಾಟ ಮಾಡುತ್ತಿರುವ ಕುರಿತು ಪಶ್ಚಿಮ ವಿಭಾಗದ ಸಿಟಿ ಮಾರ್ಕೆಟ್ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಇನ್ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದ ತಂಡ ದಾಳಿ ನಡೆಸಿದಾಗ ಹೆಲ್ಮೆಟ್ನಲ್ಲಿ 90 ಗ್ರಾಂ ಬ್ರೌನ್ ಶುಗರ್ ಮಾರಾಟ ಮಾಡುತ್ತಿದ್ದ ವಿಚಾರ ಬಯಲಾಗಿದೆ.
ಸದ್ಯ ಬಂಧಿತ ಆರೋಪಿಯಿಂದ 90ಗ್ರಾಂ ಬ್ರೌನ್ ಶುಗರ್, ನಗದು, 2 ಮೊಬೈಲ್, ಬೈಕ್ ವಶಕ್ಕೆ ಪಡೆಯಲಾಗಿದೆ. ಇನ್ನು ಆರೋಪಿಯನ್ನು ವಿಚಾರಣೆ ನಡೆಸಿದಾಗ ಆರೋಪಿಗಳು ಬೇರೆ-ಬೇರೆ ಜಿಲ್ಲೆಯವರಿಗೆ ಬಸ್ಗಳಲ್ಲಿ ದೇವರ ಪ್ರಸಾದವೆಂದು ಕೊರಿಯರ್ ಹೆಸರಿನಲ್ಲಿ ಸಾಗಾಟ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.