ಬೆಂಗಳೂರು: ಈಗ ರಾಜ್ಯದಲ್ಲಿ ನಾಯಕತ್ವದ ಬಗ್ಗೆ ದೊಡ್ಡ ಚರ್ಚೆ ಆಗುತ್ತಿದೆ. ಆಡಳಿತ ಪಕ್ಷದಲ್ಲಿ ಸಿಎಂ ಬದಲಾಯಿಸಿ ಬೇರೆಯವರನ್ನು ಸಿಎಂ ಮಾಡುವ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್‌ನಲ್ಲಿ ಈಗಲೇ ಸಿಎಂ ಯಾರಾಗಬೇಕು ಎಂದು ಕಿತ್ತಾಟ ನಡೆಯುತ್ತಿದೆ. ಆದರೆ ನಮ್ಮಲ್ಲಿ ಆ ರೀತಿ ಇಲ್ಲ, ಒನ್ ಆ್ಯಂಡ್ ಓನ್ಲಿ ಕುಮಾರಣ್ಣನೇ ನಮ್ಮ ನಾಯಕ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ನಾನು ಸಿಎಂ ಎಂದು ಅವರೇ ಹೇಳಿಕೊಳ್ಳುತ್ತಿದ್ದಾರೆ. ಅವರೇ ಹೇಗೆ ಸಿಎಂ ಆಗ್ತಾರೆ?. ಜನ ಮೊದಲು ಓಟ್ ಹಾಕಬೇಕು. ಬಿಜೆಪಿ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ಯಾರು ಜನಪರ ಕಾಳಜಿ ಹೊಂದಿದ್ದಾರೆ ಎಂದು ಜನರಿಗೆ ಗೊತ್ತಾಗಿದೆ ಎಂದರು.
ಜೆಡಿಎಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್‌ನವರು ಬಿಜೆಪಿಗೆ ಸಪೋರ್ಟ್ ಮಾಡ್ತಾರೆ ಎಂದು ಆರೋಪಿಸುತ್ತಾರೆ. ನಾವ್ಯಾಕೆ ಬಿಜೆಪಿಗೆ ಸಪೋರ್ಟ್ ಮಾಡೋಣ. ಅಲ್ಪಸಂಖ್ಯಾತರನ್ನು ವಿಧಾನಸೌಧಕ್ಕೆ ಕಳುಹಿಸಬೇಕೆಂದು ಟಿಕೆಟ್ ಕೊಟ್ಟಿರುವುದು. ಕಾಂಗ್ರೆಸ್‌ನವರು ಎಷ್ಟು ಮಂದಿ ಅಲ್ಪಸಂಖ್ಯಾತರನ್ನು ಬೆಳೆಸಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಬಹುತೇಕ ಅಲ್ಪಸಂಖ್ಯಾತ ಮುಖಂಡರು ದೇವೇಗೌಡರ ಗರಡಿಯಲ್ಲಿ ಬೆಳೆದವರು. ದೇವೇಗೌಡರು ತಯಾರಿಸಿದ ನಾಯಕರನ್ನು ಕಾಂಗ್ರೆಸ್ ಎಳೆದುಕೊಂಡಿದ್ದಾರಷ್ಟೇ. ನಮ್ಮ ಅಭ್ಯರ್ಥಿ ಎಂಟೆಕ್ ಪದವಿ ಪೂರೈಸಿದ್ದಾರೆ ಎಂದರು.
ಮುಂದಿನ ಬಾರಿ ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು. 120 ಸ್ಥಾನ ಪಡೆದು ಮತ್ತೊಮ್ಮೆ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಬೇಕು. ಅವರು ಸಿಎಂ ಆಗಿದ್ದಾಗ 25 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ್ರು. ರೈತರ, ಕೂಲಿ ಕಾರ್ಮಿಕರ, ಬಡವರ ಕೈ ಹಿಡಿಯೋರು ಯಾರು ಎಂದು ಮನೆ ಮನೆಗೆ ಹೋಗಿ ತಿಳಿಸಿ. ಮತ್ತೊಮ್ಮೆ ಜೆಡಿಎಸ್ ಅಧಿಕಾರಕ್ಕೆ ತನ್ನಿ ಎಂದು ಕಾರ್ಯಕರ್ತರಿಗೆ ಬಂಡೆಪ್ಪ ಕಾಶೆಂಪೂರ ಕರೆ ನೀಡಿದರು.
ಇದನ್ನೂ ಓದಿ: ಶಾಲಾ ಮಕ್ಕಳ ದಾಖಲಾತಿ ಪ್ರಕ್ರಿಯೆಯಲ್ಲಿ ಸರ್ಕಾರಿ ಶಾಲೆಗಳದ್ದೇ ಮೇಲುಗೈ: ಇಲ್ಲಿದೆ ಅಂಕಿಅಂಶ..