ಬೆಂಗಳೂರು: ಕಳೆದ ಒಂದೂವರೆ ತಿಂಗಳ ಹಿಂದೆ ರಸ್ತೆ ದಾಟುವಾಗ ಭೀಕರ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದ ಇಂದು ಮೃತಪಟ್ಟಿದ್ದಾರೆ. ಹನುಮಂತನ್(76) ಸಾವನ್ನಪ್ಪಿದ ದುದೈರ್ವಿ. ವೃದ್ಧ ಹನುಮಂತನ್ ಮೂಲತಃ ಸರ್ಜಾಪುರ ರಸ್ತೆಯ ಕೈಕೊಂಡ್ರಹಳ್ಳಿ ನಿವಾಸಿಯಾಗಿದ್ದು, ನಿವೃತ್ತ ಸರ್ಕಾರಿ ನೌಕರರಾಗಿದ್ದ ಹನುಮಂತನ್ 76 ವರ್ಷ ಆದರೂ ಫಿಟ್ ಅಂಡ್ ಫೈನ್ ಆಗಿದ್ದರು.
ಹಾಗಾಗಿ ಮೆಡಿಕಲ್ಗೆ ತೆರಳಿ ಔಷಧ ತರೋಕೆ ಅಂತಾ ಮನೆಯಿಂದ ಹೊರಟಿದ್ದರು. ಇನ್ನೇನು ರಸ್ತೆ ದಾಟಿ ಮೆಡಿಕಲ್ ತಲುಪಬೇಕಿತ್ತು ಅಷ್ಟೇ. ಆದರೆ ಸರ್ಜಾಪುರ ಕಡೆಯಿಂದ ಅತಿ ವೇಗದಿಂದ ಬಂದ ಬುಲೆಟ್ ಬೈಕ್ ವೃದ್ಧನಿಗೆ ಡಿಕ್ಕಿಹೊಡೆದಿದೆ. ಪರಿಣಾಮ ವೃದ್ಧನ ಕಾಲು ಮತ್ತು ಬೆನ್ನಿಗೆ ಬಲವಾದ ಪೆಟ್ಟುಬಿದ್ದಿತ್ತು.
ಗಾಯಾಳು ವೃದ್ಧ ಹನುಮಂತನ್ ಎಂಬಾತನನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಅಲ್ಲದೇ ಮನೆಗೂ ಕೂಡ ಕರೆ ತಂದಿದ್ದರು. ವೈದ್ಯರೂ ಕೂಡ ಚೇತರಿಸಿಕೊಳ್ಳುವ ಭರವಸೆ ಕೊಟ್ಟಿದ್ದರು. ಆದರೆ, ಅದೇ ನೋವಿನಲ್ಲಿದ್ದ ಹನುಮಂತನ್ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಾವನ್ನಪ್ಪಿದ್ದಾರೆ.
ಸದ್ಯ ಅಪಘಾತವೆಸಗಿದ್ದು ಓರ್ವ ಅಪ್ರಾಪ್ತ ಬಾಲಕ ಅನ್ನೋದು ಗೊತ್ತಾಗಿದೆ. ಘಟನೆ ಸಂಬಂಧ ಹೆಚ್ಎಸ್ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಓದಿ: ಅನ್ಯಾಯವಾಗಿದೆ ಎಂದು ಶಿವಮೊಗ್ಗ ಡಿಸಿ ಕಚೇರಿ ಮುಂದೆ ಬೈಕ್ಗೆ ಬೆಂಕಿ ಹಚ್ಚಿದ ಭೂಪ..