ಬೆಂಗಳೂರು: ಹುಟ್ಟೂರು ತಲುಪಲು ರೈಲಿನಲ್ಲಿ ಪ್ರಯಾಣಿಸಬೇಕಿದ್ದ ವೃದ್ಧನೊಬ್ಬ, ಬಸ್ ಇಳಿಯುವಾಗ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಗರದ ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಮಧ್ಯಪ್ರದೇಶದ ಶಾಜಾಪುರದ ನಿವಾಸಿ ಪ್ರಭುಲಾಲ್ (68) ಎಂಬ ವೃದ್ಧ ಮೃತಪಟ್ಟವರು. ಇಂದು ಮಧ್ಯಾಹ್ನ 2 ಗಂಟೆಗೆ ಚಿಕ್ಕ ಬಾಣಾವರದಿಂದ ಮಧ್ಯಪ್ರದೇಶದ ಗ್ವಾಲಿಯರ್ಗೆ ತೆರಳುವ ರೈಲಿನಲ್ಲಿ ಪ್ರಯಾಣಿಸಲು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಸ್ನಲ್ಲಿ ವಲಸೆ ಕಾರ್ಮಿಕರನ್ನು ಕರೆತಂದಿದ್ದರು. ಆಗ ಬಸ್ನಿಂದ ಇಳಿಯುವಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಆಟೋದಲ್ಲಿ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ವೃದ್ಧನ ಗಂಟಲು ದ್ರವ ಪರೀಕ್ಷೆಗೆ ವೈದ್ಯರು ಮುಂದಾಗಿದ್ದು, ಸ್ಥಳದಲ್ಲಿ ಸೋಲದೇವನಹಳ್ಳಿ ಪೋಲಿಸರು ಹಾಗೂ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.