ಬೆಂಗಳೂರು: ಒಕ್ಕಲಿಗ ಸಮುದಾಯವು ಕೃಷಿಯ ಜತೆಗೆ ಬದಲಾದ ಕಾಲಕ್ಕೆ ತಕ್ಕಂತೆ ಉದ್ಯಮ ರಂಗದಲ್ಲೂ ತೊಡಗಿಸಿಕೊಂಡು ಛಾಪು ಮೂಡಿಸಬೇಕು ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದರು. 'ಫಸ್ಟ್ ಸರ್ಕಲ್' ಸಂಘಟನೆಯು ನಗರದ ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರ ರಾಜ್ಯ ಮಟ್ಟದ ಒಕ್ಕಲಿಗರ ಉದ್ಯಮಿಗಳ 'ಉದ್ಯಮಿ ಒಕ್ಕಲಿಗ' ಸಮಾವೇಶ ಏರ್ಪಡಿಸಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಶ್ವತ್ಥ ನಾರಾಯಣ ಸಮುದಾಯವು ಕೃಷಿಯ ಜತೆಗಿನ ಸಂಬಂಧವನ್ನು ಬಿಡಬಾರದು. ಆದರೆ ಸಮಕಾಲೀನ ಜಗತ್ತು ಬೇಡುವ ಔದ್ಯಮಿಕ ಕೌಶಲ್ಯಗಳನ್ನು ಬಳಸಿಕೊಂಡು ಉದ್ಯಮಿಗಳಾಗಲು ಒಕ್ಕಲಿಗ ಸಮುದಾಯದ ಪ್ರತಿಭಾವಂತರು ಪ್ರಯತ್ನಿಸಬೇಕು. ಇದಕ್ಕೆ ಮೊದಲಿನಿಂದಲೇ ಉದ್ಯಮಶೀಲತೆಯನ್ನು ಪೋಷಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಉದ್ಯಮಿಯಾಗಲು ತಕ್ಕ ಪರಿಸರವಿದೆ. ಇಲ್ಲಿ ಕೂಡ ಒಳ್ಳೆಯ ಶಿಕ್ಷಣ, ಸಂಸ್ಕಾರ, ಮೌಲ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದನ್ನು ಮರೆತರೆ ಸಮುದಾಯಕ್ಕೆ ಒಳ್ಳೆಯದಾಗುವುದಿಲ್ಲ. ಒಕ್ಕಲಿಗ ಜನಾಂಗದ ಉತ್ಸಾಹಿಗಳು ಉದ್ಯಮಿಗಳಾಗಲು ಮುಂದೆ ಬಂದರೆ ಸರಕಾರವು ಅಗತ್ಯ ಪ್ರೋತ್ಸಾಹ ನೀಡಲಿದೆ. ಇಲ್ಲಿ ವೈಯಕ್ತಿಕ ಉದ್ದೇಶಕ್ಕಿಂತ ಹೆಚ್ಚಾಗಿ ಸಾಮುದಾಯಿಕ ಹಿತದ ಬಗ್ಗೆ ಹೆಚ್ಚಿನ ಗಮನ ಇರಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಚಿವ ಕೆ.ಗೋಪಾಲಯ್ಯ, ಸಂಸದ ಬಿ ಎನ್ ಬಚ್ಚೇಗೌಡ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಂ ರಾಯಪುರ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಗಡಿ ವಿವಾದದಲ್ಲಿ ಮಹಾರಾಷ್ಟ್ರ ನಾಯಕರು ಬಾಯಿ ಮುಚ್ಚಿ ಕೂತರೆ ಶಾಂತಿಯಿಂದ ಬದುಕಲು ಆಗುತ್ತದೆ: ಸಚಿವೆ ಕರಂದ್ಲಾಜೆ ಚಾಟಿ