ಬೆಂಗಳೂರು: ಜೂನ್ 15 ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ಶಾಲಾ ದಾಖಲಾತಿಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಮುಂದಿನ ತಿಂಗಳ ಪ್ರಾರಂಭದಿಂದ ಶಾಲೆಯನ್ನು ತೆರೆಯಲು ಸಮ್ಮತಿ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೋಷಕರಾದ ಲಗ್ಗೆರೆಯ ಸುಮತಿ, ನನ್ನ ಮಗ 7 ನೇ ತರಗತಿಯಲ್ಲಿ ಲಗ್ಗೆರೆಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾನೆ. ಸರ್ಕಾರದ ಆದೇಶದಂತೆ ಜುಲೈ 1 ರಿಂದ ತರಗತಿಗಳು ಪ್ರಾರಂಭವಾಗಬೇಕು. ಆದರೆ ಶಾಲೆಯಲ್ಲಿ ಜೂನ್ 2 ರಿಂದ ಆನ್ಲೈನ್ ತರಗತಿ ಪ್ರಾರಂಭಿಸಿದ್ದಾರೆ ಎಂದರು.
ಅದನ್ನೂ ಎರಡು-ಮೂರು ದಿನ ನಡೆಸಿ ನಂತರ ನಿಲ್ಲಿಸಿದ್ದಾರೆ. ಯಾಕೆ ಎಂದು ವಿಚಾರಿಸಲು ತೆರಳಿದರೆ ಹೋದ ವರ್ಷದ ಶೇ.80 ರಷ್ಟು ಫೀಸ್ ಕಟ್ಟಿರಬೇಕು. ನಂತರ ಈ ಶೈಕ್ಷಣಿಕ ವರ್ಷದಲ್ಲಿ ಕನಿಷ್ಟ 10 ಸಾವಿರ ರೂ. ಕೊಟ್ಟು ನವೀಕರಣ ಮಾಡಿದರೆ ಮಾತ್ರ ತರಗತಿಗೆ ಹಾಜರಾಗಲು ಅವಕಾಶ ಎಂದು ಹೇಳುತ್ತಾರೆ. ಆದರೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಸರ್ಕಾರ ಶೇ.70 ರಷ್ಟು ಫೀಸ್ ತುಂಬಿದರೆ ಸಾಕು ಎಂದು ಹೇಳಿದೆ. ಆದರೆ ಸರ್ಕಾರದ ಆದೇಶ ನಮಗೆ ಅನ್ವಯಿಸುವುದಿಲ್ಲ ಅಂತ ಶಾಲಾ ಆಡಳಿತ ಮಂಡಳಿಗಳು ಪಟ್ಟು ಹಿಡಿದಿವೆ ಎಂದು ಸಮಸ್ಯೆ ಹೇಳಿಕೊಂಡರು.
ಈ ವಿಷಯದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದೇವೆ. ದೂರವಾಣಿ ಮುಖಾಂತರ ಕೂಡ ತಿಳಿಸಿದ್ದೇವೆ. 2 ರಿಂದ 3 ಜನ ಪೋಷಕರು ಬಿಇಓ ಅವರನ್ನು ಖುದ್ದಾಗಿ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದ್ದಾರೆ. ನೋಟಿಸ್ ಕೊಟ್ಟಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಶಾಲೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನುವ ಮಾಹಿತಿ ಇದೆ. ಆನ್ಲೈನ್ ತರಗತಿಗಳು ಇಂದಿನವರೆಗೆ ನೆಡೆಯುತ್ತಲಿದೆ ಮತ್ತು ನಮ್ಮ ಮಕ್ಕಳನ್ನು ಅದರಲ್ಲಿ ಸೇರಿಸಿಲ್ಲ ಎಂದು ತಿಳಿಸಿದರು.
ಇನ್ನೋರ್ವ ಪೋಷಕರಾದ ದೀಪಿಕಾ ಮೋಹನ್ ಮಾತನಾಡಿ, ನನ್ನ ಮಗ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ. ಶೈಕ್ಷಣಿಕ ವರ್ಷ 2021-2022 ರ ದಾಖಲಾತಿಗಳನ್ನು ಜೂನ್ 15 ರಿಂದ ಪ್ರಾರಂಭ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ. ಆದರೆ ಶಾಲೆಯಲ್ಲಿ ಜೂನ್ 2 ರಿಂದಲೇ ದಾಖಲಾತಿ ಶೈಕ್ಷಣಿಕ ವರ್ಷ ಎರಡನ್ನು ಪ್ರಾರಂಭಿಸಿದ್ದಾರೆ. ಅದರಲ್ಲೂ ಸಹ ಕೆಲವು ಮಕ್ಕಳಿಗೆ ಆನ್ಲೈನ್ ತರಗತಿಗಳು ಆಗುತ್ತಿದೆ. ಕೆಲವು ಮಕ್ಕಳಿಗೆ ಸಿಗುತ್ತಿಲ್ಲ ಎಂದು ಹೇಳಿದರು.
ಪೋಷಕರು ಹೋಗಿ ಶಾಲೆಯ ಸಿಬ್ಬಂದಿಗೆ ಪ್ರೆಶ್ನೆ ಮಾಡಿದರೆ ಈ ವರ್ಷದ ನವೀಕರಣ ಶುಲ್ಕ ಕಟ್ಟಬೇಕು. ಇಲ್ಲದಿದ್ದರೆ ಆನ್ಲೈನ್ ತರಗತಿ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ. ಅದನ್ನೂ ಒಪ್ಪಿಕೊಂಡು 10 ಸಾವಿರ ರೂ. ಶುಲ್ಕವನ್ನು ಕಟ್ಟಲು ಹೋದರೆ ಆ ಮೊತ್ತವನ್ನು ಈ ಶೈಕ್ಷಣಿಕ ವರ್ಷಕ್ಕೆ ಸೇರ್ಪಡೆಯಾಗದೆ ಕಳೆದ ವರ್ಷಕ್ಕೆ ಜಮೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸಿಬ್ಬಂದಿಯನ್ನು ಕೇಳಿದರೆ ನಾವು ಯಾವುದೇ ಕಾರಣಕ್ಕೂ ಕಳೆದ ವರ್ಷದ ಶೇ.70 ರಷ್ಟು ಶುಲ್ಕವನ್ನು ಒಪ್ಪಿಕೊಳ್ಳುವುದಿಲ್ಲ. ಶುಲ್ಕ ಕಟ್ಟಿದ ಮೇಲೆ ಆನ್ಲೈನ್ ತರಗತಿಗಳ ಪೋರ್ಟಲ್ ತೆರೆದುಕೊಳ್ಳುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.
ಈ ವರ್ಷದ ಶುಲ್ಕದ ವಿವರ ಕೊಡಿ ಎಂದರೆ ಯಾವುದೇ ರೀತಿಯ ಮಾಹಿತಿ ನೀಡುತ್ತಿಲ್ಲ. ಸಿಬ್ಬಂದಿಗಳು ನೇರವಾದ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಬಗ್ಗೆ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದೆವು. ನೋಟಿಸ್ ಕೂಡ ನೀಡಿದ್ದಾರೆ. ನಂತರವೂ ಸಹ ಯಾವುದೇ ರೀತಿಯ ಶುಲ್ಕ ವಿನಾಯಿತಿ ನೀಡುತ್ತಿಲ್ಲ. ಶುಲ್ಕದ ವಿಚಾರವಾಗಿ ಯಾವುದೇ ವಿವರ ಸಿಕ್ಕಿಲ್ಲ. ಯಾವುದೇ ಉತ್ತರವನ್ನು ಸಹ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.