ಬೆಂಗಳೂರು: ಪಿಎಫ್‌ಐ ಹಾಗೂ ಅದರ 8 ಅಂಗಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಈ ಹಿನ್ನೆಲೆ ನಗರದಲ್ಲಿರುವ ಶಾಖಾ ಕಚೇರಿಗಳಿಗೆ ಗುರುವಾರ ಸಂಜೆಯೊಳಗೆ ಬೀಗಮುದ್ರೆ ಹಾಕುವಂತೆ ನಗರ ಪೊಲೀಸ್ ಆಯುಕ್ತರು ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ.
ಜೆ.ಸಿ.ನಗರದಲ್ಲಿ ಪಿಎಫ್ಐ ಕೇಂದ್ರ ಕಚೇರಿಯಿದ್ದು, ಈಗಾಗಲೇ ಎನ್ಐಎ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಇನ್ನುಳಿದ ಏಳು ಕಚೇರಿಗಳಲ್ಲಿ ಎರಡು ಕಚೇರಿಗಳು ಹಲವು ವರ್ಷಗಳಿಂದ ಬಾಗಿಲು ತೆರೆದಿಲ್ಲ. ಬಾಕಿ ಐದು ಕಚೇರಿಗಳಿಗೆ ಬೀಗ ಜಡಿಯಲು ನಗರ ಪೊಲೀಸರು ಸಿದ್ಧತೆ ನಡೆಸಿಕೊಂಡಿದ್ದು, ಸಂಜೆಯೊಳಗೆ ಬೀಗ ಹಾಕುವಂತೆ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಯಾವ್ಯಾವ ಸಂಘಟನೆಗಳು ಬ್ಯಾನ್?: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ರಿಹಾಬ್ ಇಂಡಿಯಾ ಫೌಂಡೇಶನ್, ನ್ಯಾಷನಲ್ ಕಾನ್ಫೆಡರೇಷನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜ್ಯೂನಿಯರ್ ಫ್ರಂಟ್, ಎಂಫವರ್ ಆಫ್ ಇಂಡಿಯಾ ಸೇರಿದಂತೆ ಎಂಟು ಸಂಘಟನೆಗಳು ಬಾಗಿಲು ಮುಚ್ಚಲಿವೆ.
ಪಿಎಫ್ಐ ಮೇಲೆ ದಾಖಲಾಗಿರುವ ಕೇಸ್ಗಳೆಷ್ಟು?: 2006 ರಲ್ಲಿ ಸ್ಥಾಪಿತನಾದ ಪಿಎಫ್ಐ ವಿರುದ್ಧ 322 ಪ್ರಕರಣಗಳು ದಾಖಲಾಗಿವೆ. 18 ಕೊಲೆ, 3 ಕೊಲೆ ಯತ್ನ, ಗಲಭೆ, ಗಲಾಟೆ, ದೊಂಬಿ ಸೇರಿದಂತೆ 322 ಪ್ರಕರಣಗಳು ದಾಖಲಾಗಿವೆ. 2011ರಲ್ಲಿ ಹುಣಸೂರಿನ ಇಬ್ಬರು ಬಿಬಿಎಂ ವಿದ್ಯಾರ್ಥಿಗಳನ್ನು ಮೈಸೂರಿನಲ್ಲಿ ಕಿಡ್ನ್ಯಾಪ್ ಮಾಡಿ ಬೆಂಗಳೂರಿನಲ್ಲಿ ಕೊಲೆ ಮಾಡಿದ ಪ್ರಕರಣದಲ್ಲಿ ಸಂಘಟನೆ ಕೈವಾಡವಿತ್ತು.
ಇದನ್ನೂ ಓದಿ: ಕೋಲಾರದಲ್ಲಿ ಪಿಎಫ್ಐ ಕಚೇರಿ ಬಂದ್
2016ನಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಮೈಸೂರಿನ ರಾಜು ಕೊಲೆ, 2016 ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ರುದ್ರೇಶ್ ಕೊಲೆ, ಅದೇ ವರ್ಷ ಉಡುಪಿಯಲ್ಲಿ ನಡೆದ ಪ್ರವೀಣ್ ಪೂಜಾರಿ ಹತ್ಯೆ, 2017 ರಲ್ಲಿ ದಕ್ಷಿಣ ಕನ್ನಡದ ಶರತ್ ಮಡಿವಾಳ, 2019ರಲ್ಲಿ ಶಾಸಕ ತನ್ವೀರ್ ಸೇಠ್ ಮೇಲೆ ಮೈಸೂರಿನಲ್ಲಿ ಹಲ್ಲೆ ಮಾಡಿ ಕೊಲೆ ಯತ್ನ ಪ್ರಕರಣ, ಈ ವರ್ಷ ಶಿವಮೊಗ್ಗದ ಹರ್ಷ, ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್ ನೆಟ್ಟಾರು ಕೊಲೆ ಹಾಗೂ ಬೆಂಗಳೂರಿನ ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ಗಲಭೆಯಲ್ಲಿ ಸಂಘಟನೆಯವರು ಗುರುತಿಸಿಕೊಂಡಿದ್ದರು.