ಬೆಂಗಳೂರು: ಅಯೋಧ್ಯೆಯ ಶ್ರಿರಾಮ ಮಂದಿರವನ್ನು ಕಟ್ಟಿದ್ದರ ಜೊತೆಗೆ ಉಳಿಸಿಕೊಳ್ಳಬೇಕಿರುವುದು ಎಲ್ಲ ಹಿಂದೂಗಳ ಕರ್ತವ್ಯವಾಗಿದೆ. ರಾಮಮಂದಿರ ದೇವಸ್ಥಾನ ಸಹಸ್ರ ವರ್ಷಗಳವರೆಗೆ ಉಳಿಯಬೇಕಿದೆ. ಈ ಹಿನ್ನೆಲೆಯಲ್ಲಿ ಘಂಟಾ ನಾದ ಪರಿಕ್ರಮ ಬೆಂಗಳೂರಿನಿಂದ ಹೊರಡುತ್ತಿರುವುದು ವಿಶೇಷವಾಗಿದೆ ಎಂದು ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ವಿಶ್ವಸ್ಥ ಮಂಡಳಿ ಸದಸ್ಯ ಉಡುಪಿ ಪೇಜಾವರ ಮಠದ ಪೀಠಾಧಿಪತಿ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ತಿಳಿಸಿದರು.
![ಅಯೋಧ್ಯೆ ಶ್ರೀರಾಮ ಮಂದಿರ ಪೂಜಾ ಸಾಮಗ್ರಿ ಅರ್ಪಣೆ ಕಾರ್ಯಕ್ರಮ](https://etvbharatimages.akamaized.net/etvbharat/prod-images/16-12-2023/kn-bng-02-bells-for-ramandir-from-bengaluru-7210969_16122023013732_1612f_1702670852_532.jpg)
ಶುಕ್ರವಾರ ಬನಶಂಕರಿ ಒಂದನೇ ಹಂತದಲ್ಲಿರುವ ಬ್ರಹ್ಮ ಚೈತನ್ಯ ಮಂದಿರದಲ್ಲಿ ಅಯೋಧ್ಯೆಯಲ್ಲಿ ಲೋಕಾರ್ಪಣೆಯಾಗುತ್ತಿರುವ ಶ್ರೀರಾಮ ಮಂದಿರದ ದೇಗುಲಕ್ಕೆ ಘಂಟೆಗಳು ಹಾಗೂ ಪೂಜಾ ಸಾಮಗ್ರಿಗಳನ್ನು ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲ ಊರುಗಳಲ್ಲಿ, ಗ್ರಾಮಗಳಲ್ಲಿ ಮಂದಿರ ಉದ್ಘಾಟನೆ ಮುಂಚಿನ ಕಾರ್ಯಕ್ರಮಗಳು ನಡೆಯುತ್ತಿವೆ. ಎಲ್ಲೆಡೆ ಶ್ರೀರಾಮನ ಘಂಟಾನಾದ ಕೇಳಿಬರುತ್ತಿದೆ. ಮಂದಿರದ ಕನಸು ನನಸಾಗಿದೆ. ಹಿಂದೂ ಹಿಂದೂಗಳಾಗಿ ಉಳಿದರೆ, ಶ್ರೀರಾಮಚಂದ್ರನ ದೇವಸ್ಥಾನ ಉಳಿಯುತ್ತದೆ. ಇದರಿಂದ ರಾಮ ರಾಜ್ಯದ ಕನಸು ನನಸಾಗುತ್ತದೆ. ದೇಶ ಸೇವೆಗೆ ಎಲ್ಲರೂ ಕಟಿಬದ್ಧರಾಗಿರಬೇಕಿದೆ. ಆಗ ಮಾತ್ರ ರಾಮರಾಜ್ಯದ ಕನಸು ನನಸಾಗಲಿದೆ. ಹಿಂದೂ ಸಂಸ್ಕೃತಿ ಉಳಿಯಲು ಶ್ರೀರಾಮ ಮಂದಿರವನ್ನು ಮಂದಿರವಾಗಿಯೇ ಎಂದಿಗೂ ಉಳಿಸಿಕೊಳ್ಳಬೇಕಿದೆ ಎಂದು ಪುನರುಚ್ಚಿಸಿದರು.
![ಅಯೋಧ್ಯೆ ಶ್ರೀರಾಮ ಮಂದಿರ ಪೂಜಾ ಸಾಮಗ್ರಿ ಅರ್ಪಣೆ ಕಾರ್ಯಕ್ರಮ](https://etvbharatimages.akamaized.net/etvbharat/prod-images/16-12-2023/kn-bng-02-bells-for-ramandir-from-bengaluru-7210969_16122023013732_1612f_1702670852_77.jpg)
ಯದುಗಿರಿ ಯತಿರಾಜ ಮಠದ ಶ್ರೀ ಯದುಗಿರಿ ಯತಿ ನಾರಾಯಣ ಜೀಯರ್ ಸ್ವಾಮೀಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ಕೃಷ್ಟ ಮೌಲ್ಯದ ನಾಗರೀಕತೆಯನ್ನು ತಿಳಿಸಿಕೊಟ್ಟ ರಾಮನ ಮಂದಿರವನ್ನು ಕಟ್ಟಲು 500 ವರ್ಷ ಬೇಕಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ 9 ವರ್ಷದ ಸದೃಢ ನೇತೃತ್ವ ಕೂಡ ಇದಕ್ಕೆ ಕಾರಣ ಎಂದರೆ ತಪ್ಪಿಲ್ಲ. ಈಗ ರಾಮನ ಭಂಟ ಹನುಮನ ಹಾಗೆ ಅವನ ದಿವ್ಯ ಮಂದಿರದ ಲೋಕಾರ್ಪಣೆ ಮತ್ತು ದರ್ಶನ ಪ್ರಾಪ್ತಿಗೆ ಸಜ್ಜಾಗೋಣ ಎಂದು ಕರೆ ನೀಡಿದರು.
![ಅಯೋಧ್ಯೆ ಶ್ರೀರಾಮ ಮಂದಿರ ಪೂಜಾ ಸಾಮಗ್ರಿ ಅರ್ಪಣೆ ಕಾರ್ಯಕ್ರಮ](https://etvbharatimages.akamaized.net/etvbharat/prod-images/16-12-2023/kn-bng-02-bells-for-ramandir-from-bengaluru-7210969_16122023013732_1612f_1702670852_977.jpg)
ಸ್ಟೀಲ್ ನಾಯ್ಡು ಎಂದು ಕರೆಯಲ್ಪಡುವ ರಾಜೇಂದ್ರ ನಾಯ್ಡು ಅವರನ್ನು ಅಯೋಧ್ಯೆಯ ಘಂಟಾ ನಾಯ್ಡು ಎಂದೂ ಕರೆಯಬಹುದು. ಅವರಿಗಿರುವ ರಾಮ ಮಂದಿರದ ಬಗೆಗಿನ ಭಕ್ತಿ ಅವರ ಸಕಲ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು. ಅಯೋಧ್ಯೆಯ ಶ್ರೀ ರಾಮಮಂದಿರ ಮಂಗಳ ಘಂಟೆ ಪರಿಕ್ರಮ ಯಾತ್ರೆ ಪ್ರಯುಕ್ತ ಧಾರ್ಮಿಕ ಹೋಮ ಹವನ, ಶ್ರೀ ರಾಮ ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ-ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಅಡಿದರು.
![ಅಯೋಧ್ಯೆ ಶ್ರೀರಾಮ ಮಂದಿರ ಪೂಜಾ ಸಾಮಗ್ರಿ ಅರ್ಪಣೆ ಕಾರ್ಯಕ್ರಮ](https://etvbharatimages.akamaized.net/etvbharat/prod-images/16-12-2023/kn-bng-02-bells-for-ramandir-from-bengaluru-7210969_16122023013732_1612f_1702670852_837.jpg)
15 ದೊಡ್ಡ ಘಂಟೆಗಳು, 20 ಸಣ್ಣ ಪೂಜಾ ಘಂಟೆಗಳನ್ನು ಸಮರ್ಪಿಸಲಾಗುತ್ತಿದೆ. ಶ್ರೀರಾಮ ಮಂದಿರದ ಗರ್ಭಗೃಹದಲ್ಲಿ ಬಳಸಲು 38 ಕೆಜಿ ತೂಕದ ಬೆಳ್ಳಿಯ ಅಭಿಷೇಕದ ವಸ್ತು, ದೀಪಗಳು ಹಾಗೂ ಪೂಜಾ ಸಾಮಗ್ರಿಗಳನ್ನು ಅಯೋಧ್ಯೆಗೆ ವಿಶೇಷ ವಾಹನದಲ್ಲಿ ಶನಿವಾರ ಇಲ್ಲಿಂದ ಕಳುಹಿಸಲಾಗುತ್ತಿದೆ. ನಾಲ್ಕು ದಿನಗಳ ನಂತರ ಅಯೋಧ್ಯೆಯ ಟ್ರಸ್ಟ್ಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಸಾಮಗ್ರಿಗಳನ್ನು ಸೇವಾ ರೂಪದಲ್ಲಿ ನೀಡುತ್ತಿರುವ ರಾಜೇಂದ್ರ ನಾಯ್ಡು ತಿಳಿಸಿದರು.
ಬಿಜೆಪಿಯ ಮುಖಂಡ ಸುಬ್ಬಣ್ಣ, ಮಾಜಿ ಕಾರ್ಪೊರೇಟರ್ ಸಂಗಾತಿ ವೆಂಕಟೇಶ್, ಆರ್ಎಸ್ಎಸ್ ಕಾರ್ಯಕರ್ತರು, ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು, ಹಲವು ಮಠಾಧೀಶರು ಸಾವಿರಾರು ಭಕ್ತರು ಮಂಗಳ ಘಂಟಾರಾಧನಾ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಅಂಜನಾದ್ರಿಯ ಆಂಜನೇಯನಿಗೆ 225 ಕೆಜಿ ಭಾರದ ಬೃಹತ್ ಘಂಟೆ ಸಮರ್ಪಣೆ