ಬೆಂಗಳೂರು: ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮತ್ತೊಂದು ಸವಾಲು ಹಾಕಿದ್ದಾರೆ. ನಿಮ್ಮ ಆಡಳಿತಾವಧಿಯಲ್ಲಿ ನಡೆದಿದ್ದ ಎಪಿಪಿ ಹಾಗೂ ಎಜಿಪಿ ನೇಮಕಾತಿ ಹಗರಣದ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಪಂಥಾಹ್ವಾನ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದಿರುವ ಎನ್ ಆರ್ ರಮೇಶ್, 2013ರಿಂದ 2018ರವರೆಗಿನ ನಿಮ್ಮ ಆಡಳಿತಾವಧಿಯಲ್ಲಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಹುದ್ದೆಗಳು ಖಾಲಿ ಇದ್ದವು. 197 ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಅಸಿಸ್ಟೆಂಟ್ ಗೌರ್ನ್ಮೆಂಟ್ ಫೀಡರ್ಗಳ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿತ್ತು. ಆದ್ರೂ ನೀವು ಜಾಣ ಕುರುಡರಂತೆ ವರ್ತಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಎಪಿಪಿ ಮತ್ತು ಎಜಿಪಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ 1,970 ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಪೈಕಿ, ಕಾನೂನು ಬಾಹಿರವಾಗಿ ಆಯ್ಕೆಯಾಗಿರುವ 197 ಮಂದಿಯ ಉತ್ತರ ಪತ್ರಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಉತ್ತರ ಪತ್ರಿಕೆಗಳನ್ನು ಸುಟ್ಟು ಹಾಕಲು ನೀವು ಹಾಗೂ ಅಂದಿನ ಕಾನೂನು ಸಚಿವರಾಗಿದ್ದ ಜಯಚಂದ್ರ ಕಾರಣ ಎಂದು ರಮೇಶ್ ದೂರಿದ್ದಾರೆ.
ವಾಸಸ್ಥಾನಗಳಿಗೆ ಸಮೀಪವಿರುವ ನ್ಯಾಯಾಲಯಗಳಲ್ಲಿ ನಿಯೋಜನೆ: ಆಯ್ಕೆಯಾದ ಅಭ್ಯರ್ಥಿಗಳನ್ನು ವಾಸಸ್ಥಾನದಿಂದ ಕನಿಷ್ಠ 150 ರಿಂದ 200 ಕಿ.ಮೀ. ಗಳಷ್ಟು ದೂರದ ನಗರಗಳಲ್ಲಿರುವ ನ್ಯಾಯಾಲಯಗಳಿಗೆ ನಿಯೋಜನೆ ಮಾಡಬೇಕು ಎನ್ನುವ ನಿಯಮವಿದೆ. ಆದ್ರೂ ಸಹ ಅವರವರ ವಾಸಸ್ಥಾನಗಳಿಗೆ ಸಮೀಪವಿರುವ ನ್ಯಾಯಾಲಯಗಳಲ್ಲಿ ನಿಯೋಜನೆ ಮಾಡಿರುವ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
30 ರಿಂದ 40 ಲಕ್ಷ ಹಣ ವಸೂಲಿ: ಕಾನೂನು ಬಾಹೀರವಾಗಿ ಆಯ್ಕೆಯಾಗಿರುವ 197 ಮಂದಿ ಎಪಿಪಿ ಮತ್ತು ಎಜಿಪಿ ಹುದ್ದೆಗಳ ನೇಮಕಾತಿಯಲ್ಲಿ ತಲಾ 30 ರಿಂದ 40 ಲಕ್ಷ ರೂ. ಗಳಿಗೂ ಅಧಿಕ ಹಣ ವಸೂಲಿ ಮಾಡಲಾಗಿದೆ. ಈ ಬೃಹತ್ ಹಗರಣದಲ್ಲಿ 70 ಕೋಟಿ ರೂ. ಗಳಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಈ ಹಗರಣದಲ್ಲಿ ತಮ್ಮ ಮತ್ತು ಟಿಬಿ ಜಯಚಂದ್ರ ಪಾತ್ರವಿದೆಯೇ? ಇಲ್ಲವೇ?.. ಈ ಬಗ್ಗೆ ಲೋಕಾಯುಕ್ತದಲ್ಲಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ತಾವು ಮತ್ತು ಟಿ ಬಿ ಜಯಚಂದ್ರ ಅವರು ತಮ್ಮ ಪ್ರಭಾವವನ್ನು ಬಳಸಿ ಬಿ ರಿಪೋರ್ಟ್ ಹಾಕಿಸಿದ್ದೀರಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಗರಣದ ಬಗ್ಗೆ ಬಹಿರಂಗ ಚರ್ಚೆಯ ಸವಾಲು: ತಮ್ಮ ತಟ್ಟೆಯಲ್ಲೇ ಭ್ರಷ್ಟಾಚಾರವೆಂಬ ಹೆಗ್ಗಣ ಬಿದ್ದಿದ್ದರೂ ಸಹ ಬೇರೆಯವರ ತಟ್ಟೆಯಲ್ಲಿ ಬಿದ್ದಿರುವ ನೊಣದ ಬಗ್ಗೆಯೇ ದಿನ ನಿತ್ಯ ಟೀಕೆ ಮಾಡುತ್ತ ಅಗ್ಗದ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದೀರಿ. ತಮ್ಮ ಸರ್ಕಾರದ ಅವಧಿಯಲ್ಲಿ ನಡೆದಿರುವ 97 ಬೃಹತ್ ಹಗರಣಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ಹಗರಣಗಳ ಸಂಪೂರ್ಣ ದಾಖಲೆಗಳನ್ನು ಖುದ್ದಾಗಿ ತಮ್ಮ ಅಂದಿನ ಅಧಿಕೃತ ಕಚೇರಿಗೆ ತಲುಪಿಸಿದ್ದೇವೆ. ಆದ್ರೂ ಸಹ ಆ ಹಗರಣಗಳ ಬಗ್ಗೆ ಎಂದೂ ತುಟಿಯನ್ನೇ ಬಿಚ್ಚಲಿಲ್ಲ. ತಮ್ಮದೇ ಸರ್ಕಾರದಲ್ಲಿ ಸಂಪುಟದ 13 ಮಂದಿ ಸಚಿವರುಗಳ ಮೇಲೆ ವಿವಿಧ ನ್ಯಾಯಾಲಯಗಳ ಆದೇಶದಂತೆ ವಿವಿಧ ತನಿಖಾ ಸಂಸ್ಥೆಗಳು ದೂರು ದಾಖಲಿಸಿವೆ. ಅಂತಹ ಭ್ರಷ್ಟರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ನೀವು ಮಾಧ್ಯಮಗಳ ಸಮಕ್ಷಮದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.
ಓದಿ: ರಾಜಕಾಲುವೆ ಒತ್ತುವರಿ ವಿಚಾರ: ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ.. ಎನ್.ಆರ್.ರಮೇಶ್ ಸವಾಲು