ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕುರಿತಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್ ಆರ್ ರಮೇಶ್, ಈ ಕುರಿತಂತೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.
ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಎನ್.ಆರ್.ರಮೇಶ್, ಇತ್ತೀಚೆಗೆ ಸುರಿದ ಮಹಾ ಮಳೆಯ ಅನಾಹುತಗಳ ಬಗ್ಗೆ ಪರಿಶೀಲನೆ ನಡೆಸಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 1,300 ರಾಜಕಾಲುವೆ ಒತ್ತುವರಿ ಪ್ರಕರಣಗಳನ್ನು ತೆರವುಗೊಳಿಸಿರುವುದಾಗಿ ಮಾಹಿತಿ ನೀಡಿದ್ದರು. ಆದರೆ, ಇದು ತಪ್ಪು ಮಾಹಿತಿ. ಈ ಮೂಲಕ ತಾವು ಸಿದ್ಧರಾಮಯ್ಯ ಅಲ್ಲ ಸುಳ್ಳು ರಾಮಯ್ಯ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದೀರಿ ಎಂದು ಟೀಕಿಸಿದ್ದಾರೆ.
1955 ರಾಜಕಾಲುವೆ ಒತ್ತುವರಿ ತೆರವು ಪ್ರಕರಣ ಪತ್ತೆ : ಸಿದ್ದರಾಮಯ್ಯ ಸರ್ಕಾರದ ಸಮಯದಲ್ಲಿ ಅಧಿಕಾರಿಗಳು 1955 ರಾಜಕಾಲುವೆ ಒತ್ತುವರಿ ತೆರವು ಪ್ರಕರಣಗಳನ್ನು ಪತ್ತೆ ಹಚ್ಚಿದ್ದರು. ಅವುಗಳ ಪೈಕಿ 822 ಪ್ರಕರಣಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ನಿಮ್ಮ ಅವಧಿಯಲ್ಲಿ ತೆರವು ಮಾಡಲಾದ 822 ಪ್ರಕರಣಗಳ ಪೈಕಿ ಶೇ.95ರಷ್ಟು ಪ್ರಕರಣಗಳು ಅತ್ಯಂತ ಕಡು ಬಡವರು ವಾಸಿಸುತ್ತಿದ್ದ ಮನೆಗಳು ಎಂಬುದನ್ನು ನೀವು ಮರೆಯಬಾರದು. ದೊಡ್ಡ ಬೊಮ್ಮಸಂದ್ರ ಬಡಾವಣೆಯಲ್ಲಿ ಸುಮಾರು 190 ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಆವನಿ ಶೃಂಗೇರಿ ಬಡಾವಣೆಯಲ್ಲಿ ಸುಮಾರು 179 ಮನೆಗಳನ್ನು ಏಕಾಏಕಿ ತೆರವುಗೊಳಿಸಿರುವುದನ್ನು ನೀವು ಮರೆತಂತಿದೆ ಎಂದು ಕುಟುಕಿದ್ದಾರೆ.
ಬಡತನದ ರೇಖೆಗಿಂತ ಕೆಳಗಿದ್ದ ಕುಟುಂಬಗಳು : ಈ ಎರಡೂ ಬಡಾವಣೆಗಳಲ್ಲಿ ತೆರವುಗೊಳಿಸಲ್ಪಟ್ಟ ಮನೆಗಳು ಬಡತನದ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದ ಕಡು ಬಡ ಕುಟುಂಬಗಳ ತಾತ್ಕಾಲಿಕ ಮನೆಗಳಾಗಿದ್ದವು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಆದರೆ, ದೊಡ್ಡ ದೊಡ್ಡ ಬಿಲ್ಡರ್ ಸಂಸ್ಥೆಗಳು ಮಾಡಿಕೊಂಡಿದ್ದ ಒಂದೇ ಒಂದು ಒತ್ತುವರಿಯನ್ನು ನಿಮ್ಮ ಕಾಲದಲ್ಲಿ ತೆರವು ಮಾಡದೇ ಪ್ರಭಾವಶಾಲಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೇ, ಭಂಡ ರಾಜಕಾರಣವನ್ನು ಪ್ರದರ್ಶಿಸಿರುತ್ತೀರಿ ಎಂದು ತಿಳಿಸಿದ್ದಾರೆ.
ತಡೆಯಾಜ್ಞೆ ತರಲು ಸಹಕಾರ : ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದ ಕಟ್ಟಡಗಳನ್ನು ತೆರವುಗೊಳಿಸಲು ಹತ್ತು ಹದಿನೈದು ದಿನಗಳ ಮುಂಚಿತವಾಗಿ ನೋಟೀಸ್ ನೀಡಿ ಕಾನೂನು ರೀತ್ಯಾ ಸಂಬಂಧಪಟ್ಟ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ತಂದುಕೊಳ್ಳಲು ಸಹಕಾರ ನೀಡಿರುತ್ತೀರಿ. ಈ ಕುರಿತಂತೆ ನಾನು 2016ರಲ್ಲಿ ನಿಮಗೆ 7000 ಪುಟಗಳ ದಾಖಲೆ ನೀಡಿದ್ದೇನೆ. ಅದರಲ್ಲಿ 368 ಮಂದಿ ಘಟಾನುಘಟಿ ಬಿಲ್ಡರ್ ಗಳು, ಐಟಿ ಬಿಟಿ ಸಂಸ್ಥೆಗಳು ಮಾಡಿಕೊಂಡಿರುವ ಪ್ರಭಾವಿಗಳ ವಿವರಗಳನ್ನು ಲಗತಿಸಿದ್ದೇನೆ.
ಆದರೂ ನೀವು ಆಗ ಸುಮ್ಮನಿದ್ದು, ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡದೇ ಕಂಡವರ ತಟ್ಟೆಯಲ್ಲಿ ಬಿದ್ದ ನೊಣದ ಬಗ್ಗೆ ಮಾತನಾಡುವ ರಾಜಕೀಯ ನೈತಿಕತೆ ನಿಮಗಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ರಮೇಶ್ ಪತ್ರದ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ರಾಜಕಾಲುವೆ ಒತ್ತುವರಿ ಮಾಡಿರುವ 600 ಕಟ್ಟಡ ತೆರವಿಗೆ ಸೂಚನೆ.. ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್