ಬೆಂಗಳೂರು : ಈವರೆಗೂ ಯಾವುದೇ ಸಾಕ್ಷ್ಯವನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೊಟ್ಟಿಲ್ಲ. ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆ ವಿಚಾರಕ್ಕೆ ನೋಟಿಸ್ ಕೊಟ್ಟು ಕರೆದಿದ್ದೀವೆ. ಆದರೆ, ಇಂದ್ರಜಿತ್ ಅವರು ಹಳೆ ಘಟನೆಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ವಿಚಾರಣೆ ಬಳಿಕ ಸ್ಪಷ್ಟನೆ ನೀಡಿರುವ ಸಂದೀಪ್ ಪಾಟೀಲ್, ಲಂಕೇಶ್ ಅವರು ಹಳೆ ಘಟನೆಗಳ ಬಗ್ಗೆ ಮಾತ್ರವೇ ಕೆಲ ಮಾಹಿತಿ ಕೊಟ್ಟಿದ್ದಾರೆ. ಇದರ ಆಧಾರದ ಮೇಲೆ ಕೆಲ ಹೆಸರುಗಳನ್ನು ಹೇಳಿದ್ದಾರೆ. ಆದರೆ, ಡ್ರಗ್ಸ್ ಕೇಸ್ಗೆ ಸಂಬಂಧಪಟ್ಟಂತೆ ಯಾವುದೇ ದಾಖಲೆ ಕೊಟ್ಟಿಲ್ಲ.
ಹೀಗಾಗಿ ಮತ್ತೊಮ್ಮೆ ಇಂದ್ರಜಿತ್ಗೆ ನೋಟಿಸ್ ನೀಡಲಿದ್ದೇವೆ. ನೋಟಿಸ್ ಕೊಟ್ಟು ದಾಖಲೆ ನೀಡಲು ಸೂಚಿಸುತ್ತೇವೆ. ಈ ಬಗ್ಗೆ ಸೂಕ್ತ ದಾಖಲೆ ಕೊಟ್ಟರೆ ಈ ವಿಚಾರವಾಗಿ ತನಿಖೆ ನಡೆಸಬಹುದು ಎಂದರು.
ಮತ್ತೊಂದು ಸಿಸಿಬಿ ತಂಡ ಕೂಡ ದಾಖಲೆ ಸಂಗ್ರಹಿಸುವತ್ತ ಕಾರ್ಯ ನಿರ್ವಹಿಸಲಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.