ಬೆಂಗಳೂರು: ಕಳಂಕ ರಹಿತರು ಮತ್ತು ಪಕ್ಷ ನಿಷ್ಠರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಆರ್‌ಎಸ್‌ಎಸ್ ಮುಖಂಡರು ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಕಳೆದ ರಾತ್ರಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ನೇತೃತ್ವದಲ್ಲಿ ಆರ್‌ಎಸ್‌ಎಸ್ ಕಚೇರಿ ಕೇಶವ ಕೃಪಾದಲ್ಲಿ ಸಭೆ ನಡೆಸಲಾಗಿದೆ. ಆರ್‌ಎಸ್‌ಎಸ್ ಮುಖಂಡರ ಸಮ್ಮುಖದಲ್ಲಿ ಸಂಪುಟದಲ್ಲಿ ಎಂತಹವರಿಗೆ ಅವಕಾಶ ನೀಡಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
ಆದಷ್ಟು ಪಕ್ಷ ನಿಷ್ಠೆ, ಆರ್‌ಎಸ್‌ಎಸ್ ಹಿನ್ನೆಲೆಯುಳ್ಳ, ಕಳಂಕರಹಿತರಿಗೆ ಸಚಿವ ಸ್ಥಾನ ಕೊಟ್ಟರೆ ಅನುಕೂಲ ಎನ್ನುವ ತೀರ್ಮಾನಕ್ಕೆ ಬಂದ ಆರ್‌ಎಸ್ಎಸ್ ಮುಖಂಡರು, ಯಡಿಯೂರಪ್ಪ ಅವರಿಗೆ ಈ ಕುರಿತು ಸಲಹೆ ನೀಡುವ ಜೊತೆಗೆ ಈ ಬಗ್ಗೆ ಹೈಕಮಾಂಡ್‌ನಿಂದಲೇ ಬಿಎಸ್ವೈ ಮೇಲೆ ಒತ್ತಡ ಹಾಕಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಬಿಎಸ್ವೈ ಅಕ್ಕ ಪಕ್ಕ ಇರುವ ಕೆಲ ಶಾಸಕರಿಂದ ಹಿಂದೆ ಬಿಜೆಪಿಗೆ ದೊಡ್ಡ ಮಟ್ಟದ ಡ್ಯಾಮೇಜ್ ಆಗಿತ್ತು. ಆಪ್ತರ ಲಾಬಿಗೆ ಮಣಿದು ಮತ್ತದೇ ಕಳಂಕಿತರಿಗೆ ಈ ಬಾರಿಯೂ ಮಣೆ ಹಾಕಬಾರದು. ಈ ಬಗ್ಗೆ ಸೂಕ್ತ ಸಲಹೆ ಕೊಡಿ ಎಂದು ಹೈಕಮಾಂಡ್ಗೆ ಮನವಿ ಮಾಡಲು ಆರ್‌ಎಸ್‌ಎಸ್ ಮುಖಂಡರು ಮುಂದಾಗಿದ್ದಾರಂತೆ.