ಬೆಂಗಳೂರು: ಬಿಬಿಎಂಪಿ ಆಸ್ತಿ ತೆರಿಗೆ ವಿಧಿಸುವಲ್ಲಿ ಹಲವು ಬದಲಾವಣೆಗಳನ್ನು ತರುತ್ತಿದ್ದು, ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿದ್ದ ಶೇ.75 ರಷ್ಟು ರಿಯಾಯಿತಿಯನ್ನು 2021-22 ನೇ ಸಾಲಿನ ಆರ್ಥಿಕ ಸಾಲಿನಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. 2020 ರ ಬಿಬಿಎಂಪಿ ಹೊಸ ಕಾಯ್ದೆಯಲ್ಲಿಯೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆಸ್ತಿತೆರಿಗೆಯಲ್ಲಿ ರಿಯಾಯಿತಿ ನೀಡಿಲ್ಲ. ಹೀಗಾಗಿ ಈ ವರ್ಷದಿಂದಲೇ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಪೂರ್ಣಪ್ರಮಾಣದಲ್ಲಿ ವಸೂಲಿ ಮಾಡಲು ಸಿದ್ಧತೆ ನಡೆಸಿದೆ.
ಬಿಬಿಎಂಪಿಯ ಆಸ್ತಿತೆರಿಗೆ ಪಾವತಿಗಿದ್ದ ಶೇ.5 ರಷ್ಟು ವಿನಾಯಿತಿ ಏಪ್ರಿಲ್ 30 ಕ್ಕೆ ಮುಕ್ತಾಯವಾಗಿದ್ದು, 1703 ಕೋಟಿ ರೂ ಆಸ್ತಿತೆರಿಗೆ ಸಂಗ್ರಹವಾಗಿದೆ. ಈ ವರ್ಷ ಬೊಮ್ಮನಹಳ್ಳಿ, ಪೂರ್ವ ವಲಯ, ದಾಸರಹಳ್ಳಿ ಯಲಹಂಕದಲ್ಲಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ಆದರೆ ಮಹದೇವಪುರ, ದಕ್ಷಿಣ, ಆರ್ ಆರ್ ನಗರ, ಪಶ್ಚಿಮ ವಲಯದಲ್ಲಿ ಇಳಿಕೆಯಾಗಿದೆ. ಹೀಗಾಗಿ ಸಂಪನ್ಮೂಲ ಗುರಿ ಸಾಧನೆಗೆ ಪಾಲಿಕೆ ಕ್ರಮಕೈಗೊಳ್ಳುತ್ತಿದ್ದು, ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಬೇಡಿಕೆಯ ನೋಟಿಸ್ ಜಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸಾವಿರಾರು ಶಿಕ್ಷಣ ಸಂಸ್ಥೆಗಳಿದ್ದರೂ, 615 ಶಿಕ್ಷಣ ಸಂಸ್ಥೆಗಳು ಮಾತ್ರ ಪಾಲಿಕೆಯಿಂದ ಅನುಮೋದನೆ ಪಡೆದು ಆಸ್ತಿತೆರಿಗೆಯಲ್ಲಿ ರಿಯಾಯಿತಿ ಪಡೆದಿದ್ದರು. ಇನ್ಮುಂದೆ ಇವು ಪೂರ್ಣ ಪ್ರಮಾಣದಲ್ಲಿ ಆಸ್ತಿತೆರಿಗೆ ಪಾವತಿಸಬೇಕಿದೆ.
1976 ರ ಕೆಎಂಸಿ ಕಾಯ್ದೆಯಲ್ಲಿದ್ದ ಲೋಪ ಬಳಸಿಯೂ ಪೂರ್ತಿ ಆಸ್ತಿತೆರಿಗೆ ಪಾವತಿಸಲು ನಿರಾಕರಿಸುತ್ತಿದ್ದವು. ಇದೀಗ ಕಾನೂನು ಲೋಪ ಸರಿಪಡಿಸಲಾಗಿದೆ. ಕೆಎಂಸಿ ಕಾಯ್ದೆಯ ಸೆಕ್ಷನ್ 152 (ಐ) (ಬಿ) ಪ್ರಕಾರ, ಸರ್ಕಾರಿ ಹಾಗೂ ಸ್ಥಳೀಯ ಪ್ರಾಧಿಕಾರದ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡಬಹುದು. ಹಾಗಾಗಿ ಇತರ ಖಾಸಗಿ ಶಿಕ್ಷಣ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ: ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದವರಿಗೂ ಪರಿಹಾರ: ಹೈಕೋರ್ಟ್ಗೆ ಮಾಹಿತಿ ನೀಡಿದ ಸರ್ಕಾರ