ಬೆಂಗಳೂರು : ಸಿದ್ದರಾಮಯ್ಯ ಒಬ್ರೇ ಅಲ್ಲ ರಾಜ್ಯದಲ್ಲಿ ಯಾರೇ ಲೆಕ್ಕ ಕೇಳಿದ್ರೂ ನಾವು ಕೊಡುತ್ತೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ.
ಕೋವಿಡ್-19 ಸಂಬಂಧ ಬೆಂಗಳೂರು ದಕ್ಷಿಣ ವಲಯ ಉಸ್ತುವಾರಿಯೂ ಆಗಿರುವ ಅವರು ಮಾತನಾಡುತ್ತಾ, ಕಾಂಗ್ರೆಸ್ನ ಲೆಕ್ಕ ಕೊಡಿ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದರು. ನಮ್ಮ ಸರ್ಕಾರ ಎಲ್ಲದರ ಬಗ್ಗೆ ಲೆಕ್ಕ ಕೊಡುತ್ತದೆ. ಅವರ ಸರ್ಕಾರದಲ್ಲಿ ಅವರು ಏನಾದ್ರೂ ಲೆಕ್ಕ ಕೊಟ್ಟಿಲ್ಲದಿದ್ರೆ, ಅದೇ ಗುಂಗಿನಲ್ಲಿ ನಮ್ಗೂ ಕೇಳ್ತಿದ್ದಾರೆ.
ನಾವಂತೂ ಪೈಸೆ ಪೈಸೆಯೂ ಲೆಕ್ಕ ಕೊಡ್ತೀವಿ ಎಂದು ತಿಳಿಸಿದರು. ಇವತ್ತಿನ ಸಭೆಯಲ್ಲಿ ಕೆಲ ತೀರ್ಮಾನ ಮಾಡಿದ್ದೇವೆ. ಬೆಡ್ ಹೆಚ್ಚಳದ ಬಗ್ಗೆ ತೀರ್ಮಾನ ಮಾಡಿದ್ದೇವೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಹೆಚ್ಚಳಕ್ಕೆ ಸೂಚಿಸಲಾಗಿದೆ. ಪ್ರತಿ ಕ್ಷೇತ್ರದಲ್ಲಿ ಎಷ್ಟು ಬೆಡ್ ಲಭ್ಯತೆ, ಆಸ್ಪತ್ರೆ ಬಗ್ಗೆ ಮಾಹಿತಿ ಶಾಸಕರಿಗೆ ಸಿಗಬೇಕು. ಮಂಗಳವಾರ ದಕ್ಷಿಣ ಕ್ಷೇತ್ರದಲ್ಲಿ ಬರುವ ಶಾಸಕರು ಹಾಗೂ ಖಾಸಗಿ ಆಸ್ಪತ್ರೆಗಳ ಜೊತೆಗೂ ಸಭೆ ಕರೆದಿದ್ದೇನೆ ಎಂದು ವಿವರಿಸಿದರು.
ಶಾಸಕರು, ಪಾಲಿಕೆ ಸದಸ್ಯರಿಗೆ ಹೆಚ್ಚಿನ ಹೊಣೆ : ಶಾಸಕರು ಹಾಗೂ ಪಾಲಿಕೆ ಸದಸ್ಯರಿಗೆ ಹೆಚ್ಚಿನ ಹೊಣೆ ನೀಡಲಾಗಿದೆ. ವಾರ್ಡ್‌ವಾರು ತಲಾ 10 ಸ್ವಯಂಸೇವಕರ ನೇಮಕ ಮಾಡಲಾಗಿದೆ. ವಾರ್ಡ್ಗಳಲ್ಲಿ ಸೋಂಕು ಪತ್ತೆ ಆದ ಕೂಡಲೇ ಸ್ವಯಂ ಸೇವಕರು, ಸೋಂಕಿತರ ಮನೆ, ಬೀದಿಯನ್ನು ಕಂಟೇನ್ಮೆಂಟ್ ವಲಯ ಮಾಡಲು ಕೂಡಲೇ ಕ್ರಮಕೈಗೊಳ್ಳುತ್ತಾರೆ ಎಂದರು.
ವೈದ್ಯರು ಕರ್ತವ್ಯದಿಂದ ತಪ್ಪಿಸುವ ಹಾಗಿಲ್ಲ : ಖಾಸಗಿ ಆಸ್ಪತ್ರೆಯಲ್ಲಿ ಸೇವೆಗೆ ಬರಲು ಕೆಲ ವೈದ್ಯ ಸಿಬ್ಬಂದಿ ನಿರಾಕರಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದಕ್ಷಿಣ ವಲಯದಲ್ಲಿ ಖಾಸಗಿ ಆಸ್ಪತ್ರೆಯೊಂದರ ಮೂವರು ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಫೋರ್ಟೀಸ್ ಆಸ್ಪತ್ರೆಯ ಮೂವರು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಮೂವರನ್ನು ಸಸ್ಪೆಂಡ್ ಮಾಡಿಸಿದ್ದೇವೆ ಎಂದರು.
ಇನ್ಮುಂದೆ ವೈದ್ಯ ಸಿಬ್ಬಂದಿ ಕರ್ತವ್ಯದಿಂದ ತಪ್ಪಿಸಿಕೊಳ್ಳುವಂತಿಲ್ಲ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದರು. ಇನ್ನು, ಲಾಕ್ಡೌನ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಮನಸ್ಸಲ್ಲೂ ಲಾಕ್ಡೌನ್ ಬಗ್ಗೆ ಯಾವುದೇ ವಿಚಾರ ಇಲ್ಲ. ಸದ್ಯಕ್ಕೆ ಶನಿವಾರ ಲಾಕ್ಡೌನ್ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಈ ಬಗ್ಗೆ ಯಾವುದೇ ಚರ್ಚೆನೂ ನಡೆದಿಲ್ಲ. ಅಂಥ ನಿರ್ಧಾರವನ್ನು ಸಿಎಂ ತೆಗೆದುಕೊಳ್ಳುತ್ತಾರೆ ಎಂದರು.