ಬೆಂಗಳೂರು: ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದ ಅಲ್ಲಿನ ಜನರ ಬದುಕು ದುಸ್ತರವಾಗಿದೆ. ಈಗ ಇವರ ನೆರವಿಗೆ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ಧಾವಿಸಿದೆ.
ಪ್ರವಾಹದಿಂದ ಸಂತ್ರಸ್ತರು ಕಾಳಜಿ ಕೇಂದ್ರಗಳಲ್ಲಿ ದಿನ ಕಳೆಯುತ್ತಿದ್ದಾರೆ. ಮನೆ-ಮಠ ಕಳೆದುಕೊಂಡಿರುವ ಜನರಿಗಾಗಿ ದಿನನಿತ್ಯ ಬಳಕೆಯ ಧವಸ ಧಾನ್ಯಗಳ ಕಿಟ್, ಬ್ಲ್ಯಾಂಕೆಟ್, ಬಟ್ಟೆ ಸೇರಿದಂತೆ ವಿವಿಧ ವಸ್ತುಗಳನ್ನು ನೆರವಿನ ರೂಪದಲ್ಲಿ ನೀಡಲಾಗುತ್ತಿದೆ. ಈ ವಸ್ತುಗಳನ್ನು ವಿತರಿಸಲು ಸಂಸ್ಥೆಯ ರಾಜ್ಯಾಧ್ಯಕ್ಷ ಶಿವಕುಮಾರ್ ಮೇಟಿ ನೇತೃತ್ವದ ತಂಡ ಕಲಬುರಗಿಗೆ ಪ್ರಯಾಣ ಬೆಳೆಸಿದೆ. ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಟೆಂಗಳಿ ಗ್ರಾಮದ ನಿರಾಶ್ರಿತರಿಗೆ ಧವಸ ಧಾನ್ಯ ಮತ್ತು ಇತರೆ ಜೀವನ ಅವಶ್ಯಕ ವಸ್ತುಗಳನ್ನು ವಿತರಿಸಲಿದ್ದಾರೆ.
ಉತ್ತರ ಕರ್ನಾಟಕ ಗೆಳೆಯರ ಚಾರಿಟೇಬಲ್ ಟ್ರಸ್ಟ್ ಕೆಂಗೇರಿ, ಕವಿಪವಿ ಸಂಘ ಬೆಂಗಳೂರು, ಎಚ್.ಇ.ಎಲ್ ಉತ್ತರ ಕರ್ನಾಟಕ ಬಳಗ, ಮಹದೇವಪುರ ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘ, ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್, ಸರ್ಜಾಪುರ ಉತ್ತರ ಕರ್ನಾಟಕ ಸಂಘ, ಉತ್ತರ ಕರ್ನಾಟಕ ಜನವರ ವೇದಿಕೆ ದಾಸರಹಳ್ಳಿ, ಉತ್ತರ ಕರ್ನಾಟಕ ನಾಗರಿಕ ಅಭಿವೃದ್ಧಿ ಸಂಘ, ಸರ್ಜಾಪುರ ಉತ್ತರ ಕರ್ನಾಟಕ ಸಮಾಜ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಸೇರಿದಂತೆ ನಿವೃತ್ತ ಐಎಎಸ್ ಅಧಿಕಾರಿ ಸಿ. ಸೋಮಶೇಖರ್ ಆರ್ಥಿಕ ನೆರವು ನೀಡಿದ್ದಾರೆ.