ಬೆಂಗಳೂರು: ಕೊರೊನಾ ಹಾವಾಳಿಗೆ ತತ್ತರಿಸಿ ಹೋಗುತ್ತಿರುವ ಚಿತ್ರರಂಗದ ಕಾರ್ಮಿಕರಿಗೆ ನೆರವಾಗುವ ಮೂಲಕ ಬೇರೆ ರಾಜ್ಯದ ಕಲಾವಿದರು ತಮ್ಮ ಅಸ್ತಿತ್ವವನ್ನು ಸಾಬೀತು ಮಾಡಿದ್ದಾರೆ. ಆದರೆ, ನಮ್ಮ ಕಲಾವಿದರಿಗೆ ಇನ್ನೂ ಕನ್ನಡ ಚಿತ್ರರಂಗದ ಕಲಾವಿದರ ಅಳಲು ಕೇಳಿದಂತೆ ಕಾಣುತ್ತಿಲ್ಲ.
ಕನ್ನಡ ಚಿತ್ರರಂಗದ ಯಾವ ಹಿರಿಯ ಕಲಾವಿದರೂ ತಮ್ಮ ಕಿರಿಯ ಕಲಾವಿದರ, ಕಾರ್ಮಿಕರ ಸಹಾಯಕ್ಕೆ ಮುಂದೆ ಬಂದಿಲ್ಲ. ಹಿಂದೆ ಏನೇ ಸಮಸ್ಯೆ ಎದುರಾದರೂ ಹಿರಿಯ ನಟರುಗಳಾದ ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ, ಡಾ. ಅಂಬರೀಶ್ ಅಂತಹವರು ಮುಂದೆ ನಿಂತು ಸಮಸ್ಯೆ ಎದುರಿಸುತ್ತಿದ್ದರು. ಆದರೆ, ಸ್ಟಾರ್ ನಟರು ಮಾತ್ರ ಇನ್ನೂ ಸೈಲೆಂಟಾಗಿರುವುದು ವಿಷಾದನೀಯ.
ನಿನ್ನೆ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘ, ದರ್ಶನ್ ಅಭಿಮಾನಿಗಳ ಸಂಘ ಅಗತ್ಯ ವಸ್ತುಗಳ ಪೂರೈಕೆಗೆ ಮುಂದಾಗಿದೆ. ಆದರೆ, ಕೋಟಿಗಟ್ಟಲೆ ಸಂಭಾವನೆ ಪಡೆಯುವ ನಟ ನಟಿಯರಿಗೆ ಇನ್ನೂ ತಮ್ಮ ಕಾರ್ಮಿಕರ ಮೇಲೆ ಕನಿಕರ ಬಂದಿಲ್ಲ.
ನಿಖಿಲ್ ಕುಮಾರಸ್ವಾಮಿಯವರು ಬೆಂಗಳೂರಿನ ಚಲನ ಚಿತ್ರ ಕಾರ್ಮಿಕರ ಒಕ್ಕೂಟದ ಕಚೇರಿ ಮುಂದೆ ದವಸ ಧಾನ್ಯಗಳ ವಿತರಣೆ ಅಂತ ಹೇಳಿಕೊಂಡಿದ್ದರು. ಆದರೆ, ಮಾಧ್ಯಮದವರಿಗೆ ಈ ಬಗ್ಗೆ ಮಾಹಿತಿ ದೊರೆತ ಕೆಲವೇ ನಿಮಿಷಗಳಲ್ಲಿ ಆ ಕಾರ್ಯಕ್ರಮ ನಡೆಯುತ್ತಿಲ್ಲ ಎಂಬ ಮತ್ತೊಂದು ಮಾಹಿತಿ ಕೂಡ ಬಂತು.
ಇನ್ನಾದರೂ ಹಿರಿಯ ಕಲಾವಿದರು ತಮ್ಮದೇ ಕಾರ್ಮಿಕರ ನೆರವಿಗೆ ಮುಂದಾಗಬೇಕು ಎಂಬುದು ನಮ್ಮ ಆಶಯ.