ಬೆಂಗಳೂರು: ''ನಾಳೆ (ಬುಧವಾರ) ನಡೆಯಲಿರುವ ಪದಗ್ರಹಣ ಸಮಾರಂಭಕ್ಕೆ ವಿಶೇಷ ಸಿದ್ಧತೆ ಮಾಡಿಲ್ಲ. ಪಕ್ಷದ ಕಚೇರಿಯಲ್ಲಿ ಸರಳವಾಗಿ ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನನಗೆ ಆಶೀರ್ವಾದ ಮಾಡಿ ಜವಾಬ್ದಾರಿ ಹಸ್ತಾಂತರ ಮಾಡಲಿದ್ದಾರೆ'' ಎಂದು ನಿಯೋಜಿತ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ.
ಶಿವಾನಂದ ವೃತ್ತದ ಬಳಿ ಇರುವ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನಾಳೆ ನಡೆಯುವ ಪದಗ್ರಹಣ ಸಮಾರಂಭಕ್ಕೆ ವಿಶೇಷವಾದ ಸಿದ್ಧತೆ ಏನೂ ಆಗಿಲ್ಲ, ನಾಳೆ ಜಿಲ್ಲೆಗಳಿಂದ ಕಾರ್ಯಕರ್ತರು ಬರ್ತಾರೆ. ನಮ್ಮ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ನನಗೆ ಆಶೀರ್ವಾದ ಮಾಡಿ ಜವಾಬ್ದಾರಿ ಹಸ್ತಾಂತರ ಮಾಡ್ತಾರೆ. ನಮ್ಮ ಎಲ್ಲ ಶಾಸಕರನ್ನು, ಮಾಜಿ ಶಾಸಕರನ್ನು, ಜಿಲ್ಲಾಧ್ಯಕ್ಷರನ್ನು ನಾಳೆಯ ಕಾರ್ಯಕ್ರಮಕ್ಕೆ ಬರಬೇಕು ಎಂದು ಮಾಧ್ಯಮಗಳ ಮೂಲಕ ಮನವಿ ಮಾಡ್ತೇನೆ. ನಾನೂ ಕೂಡ ಎಲ್ಲ ಶಾಸಕರನ್ನು ಖುದ್ದಾಗಿ ಕರೆ ಮಾಡಿ ಕರೆಯುತ್ತೇನೆ'' ಎಂದರು.
ಶಾಸಕಾಂಗ ಪಕ್ಷದ ಸಭೆ ನ.17ಕ್ಕೆ: ''ಶಾಸಕಾಂಗ ಪಕ್ಷದ ಸಭೆ ನ.17 ರಂದು (ಶುಕ್ರವಾರ) ನಿಗದಿಯಾಗಿದೆ. ಜೆ.ಪಿ. ನಡ್ಡಾ ಅವರಿಗೆ ಕರೆ ಮಾಡಿದ್ದೆ, ಅವರಿಂದ ಸಂದೇಶ ಬರಬೇಕಿದೆ. ಆದರೆ, ಕೇಂದ್ರದ ವೀಕ್ಷಕರು ನ. 16ರ ಸಂಜೆ ಬರ್ತಾರಾ? ಶುಕ್ರವಾರ ಬರ್ತಾರಾ ಅನ್ನೋದು ಗೊತ್ತಿಲ್ಲ. ಶುಕ್ರವಾರ ನಿಗದಿಯಾದ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಿಕೆಯಂತಹ ಬೆಳವಣಿಗೆ ನಡೆದಿಲ್ಲ. ವೀಕ್ಷಕರು ಯಾರು ಬರ್ತಾರೆ ಅಂತ ಜೆ.ಪಿ. ನಡ್ಡಾ ಅವರು ತಿಳಿಸಲಿದ್ದಾರೆ'' ಎಂದು ಹೇಳಿದರು.
''ಹಿರಿಯರ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ''ಎಲ್ಲರನ್ನೂ ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ. ಯಾರನ್ನು ಭೇಟಿ ಮಾಡ್ತೇನೆ ಅಂತ ತಿಳಿಸುತ್ತೇನೆ. ಎಲ್ಲರ ವಿಶ್ವಾಸದೊಂದಿಗೆ ಜವಾಬ್ದಾರಿ ನಿರ್ವಹಿಸುತ್ತೇನೆ'' ಎಂದರು.
ಬಿಜೆಪಿ ಕಚೇರಿ ಆವರಣ ಕೇಸರಿಮಯ: ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿ. ವೈ. ವಿಜೇಯಂದ್ರ ಅಧಿಕಾರ ಸ್ವೀಕಾರ ಮಾಡುವ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯ ಒಂದು ಕಿಲೋ ಮೀಟರ್ ಸುತ್ತಮುತ್ತ ಕೇಸರಿಮಯವನ್ನಾಗಿಸಲಾಗಿದೆ. ನಾಳೆ ಅಧಿಕೃತವಾಗಿ ವಿಜಯೇಂದ್ರ ಅಧಿಕಾರ ಸ್ವೀಕಾರ ಮಾಡಲಿದ್ದು, ಈ ನಿಟ್ಟಿನಲ್ಲಿ ರಸ್ತೆಯುದ್ದಕ್ಕೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಇದರ ಬೆನ್ನಲ್ಲೇ ಇಡೀ ಬಿಜೆಪಿ ಕಚೇರಿಯನ್ನು ಕೇಸರಿಮಯ ಮಾಡಿದ್ದು, ಕೇಸರಿ ಬಣ್ಣದ ಬಟ್ಟೆಯ ಮೂಲಕ ಕಚೇರಿಯನ್ನು ಸಿಂಗರಿಸಲಾಗಿದೆ. ಚಪ್ಪರ ಹಾಕಿ ಮಾವಿನ ಎಲೆಗಳಿಂದ ಕಚೇರಿಯನ್ನು ಅಲಂಕರಿಸಲಾಗಿದೆ.
ಇದನ್ನೂ ಓದಿ: ಯತ್ನಾಳ್, ಸೋಮಣ್ಣ ಸೇರಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ: ಬಿ ವೈ ವಿಜಯೇಂದ್ರ