ಬೆಂಗಳೂರು: ಪ್ಲಾಸ್ಟಿಕ್ ಬಳಕೆ ನಿಷೇಧದ ಬಳಿಕ ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಮಾಡುತ್ತಿದ್ದ ಕಂಪನಿಗಳು ಬಾಗಿಲು ಮುಚ್ಚಿ ಪ್ಲಾಸ್ಟಿಕ್ ಬೆಲೆ ಕಳೆದುಕೊಂಡಿದೆ. ಒಣಕಸ ಸಂಗ್ರಹ ಘಟಕಗಳಲ್ಲೂ ಪ್ಲಾಸ್ಟಿಕ್ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಸಮಸ್ಯೆ ಎದುರಿಸುವಂತಾಗಿದೆ.
ವಿವಿಧ ಕಾರಣಗಳಿಂದ ಸಿಮೆಂಟ್ ತಯಾರಿಕೆಗೆ ಬಳಸುತ್ತಿದ್ದ ಲೋ ವ್ಯಾಲ್ಯೂ ಪ್ಲಾಸ್ಟಿಕ್‌ಗಳನ್ನು ಸಿಮೆಂಟ್ ತಯಾರಿಕಾ ಕಾರ್ಖಾನೆಗಳು ಖರೀದಿಸುತ್ತಿಲ್ಲ. ಪರಿಣಾಮ ಪ್ಲಾಸ್ಟಿಕ್ ತ್ಯಾಜ್ಯ ಬಿಬಿಎಂಪಿ ಲ್ಯಾಂಡ್ ಫಿಲ್ಗಳಿಗೆ ಹೋಗುವ ಅಪಾಯ ಎದುರಾಗಿದೆ. ಈಗಾಗಲೇ ಹಲವಾರು ಬಾರಿ ಹಸಿರು ನ್ಯಾಯಾಧಿಕರಣ ಲ್ಯಾಂಡ್ ಫಿಲ್ಗಳನ್ನು ಬಳಸಬಾರದೆಂದು ಪಾಲಿಕೆಗೆ ಎಚ್ಚರಿಸಿದ್ರೂ ಮಿಶ್ರತ್ಯಾಜ್ಯ ಹೆಚ್ಚಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಲ್ಯಾಂಡ್ ಫಿಲ್ಗಳಿಗೆ ಕಸ ಸುರಿಯುತ್ತಿದೆ.
ಮೊದಲು ನಮಗೆ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ಗಳು ಬರುತ್ತಿದ್ದವು. ಅವುಗಳನ್ನು ಮರುಬಳಕೆ ಮಾಡುವುದೆ ಕಷ್ಟವಾಗಿತ್ತು. ಆದರೆ, ಪ್ಲಾಸ್ಟಿಕ್ ನಿಷೇಧದಿಂದ ಸ್ವಲ್ವ ಸುಲಭವಾಗಿದೆ. ಬಿಬಿಎಂಪಿ ನಡೆಸುತ್ತಿರುವ ಒಣಕಸ ಸಂಗ್ರಹ ಕೇಂದ್ರಗಳು ಲೋ ವ್ಯಾಲ್ಯೂ ಪ್ಲಾಸ್ಟಿಕ್‌ಗಳನ್ನು ಮರುಬಳಕೆಗೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಬಿಎಂಪಿ ವಾಹನಗಳಿಗೆ ನಾವು ವಾಪಸ್ ಕಳುಹಿಸುತ್ತಿದ್ದೇವೆ. ಅವರು ಡಂಪ್ ಮಾಡುವಲ್ಲಿ ಮಾಡುತ್ತಿದ್ದಾರೆ ಎನ್ನುತ್ತಾರೆ ಒಣಕಸ ಸಂಗ್ರಹ ಘಟಕದ ಚಿನ್ನನವರು.
ವಿಶೇಷ ಆಯುಕ್ತರಾದ ರಂದೀಪ್ ಪ್ರತಿಕ್ರಿಯಿಸಿ, ಮರುಬಳಕೆಗೆ ಪ್ಲಾಸ್ಟಿಕ್ ತೆಗೆದುಕೊಳ್ಳುತ್ತಿಲ್ಲ ಎಂಬ ವಿಚಾರ ಇನ್ನೂ ನಮ್ಮ ಗಮನಕ್ಕೆ ಬಂದಿಲ್ಲ. ಸಿಮೆಂಟ್ ಫ್ಯಾಕ್ಟರಿಗಳು ತೆಗೆದುಕೊಳ್ಳುತ್ತಿಲ್ಲ ಎಂಬುದು ಗೊತ್ತಾಗಿದೆ. ಪ್ಲಾಸ್ಟಿಕ್‌ಗಳನ್ನು ಸದ್ಯ ದೊಡ್ಡಬಿದಿರೆಕಲ್ಲು ಘಟಕದಲ್ಲಿ ಶೇಖರಿಸಿಡಲು ಯೋಚಿಸಲಾಗುತ್ತಿದೆ. ವಿಮಾನನಿಲ್ದಾಣ ರಸ್ತೆ ನಿರ್ಮಾಣಕ್ಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಬಗ್ಗೆ ಬಿಬಿಎಂಪಿ ಜೊತೆ ಒಣಕಸ ಸಂಗ್ರಹಣಾ ಘಟಕಗಳನ್ನು ನಡೆಸಿಕೊಂಡು ಹೋಗುತ್ತಿರುವ ಹಸಿರು ದಳ ಸಂಸ್ಥೆಯ ನಳಿನಿ ಶೇಖರ್ ಮಾತನಾಡಿ, ಪ್ಲಾಸ್ಟಿಕ್ ನಿಷೇಧದ ಬಳಿಕ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣವೂ ಕಡಿಮೆಯಾಗಿದೆ. ಆದರೆ. ಶೇ. ಮೂವತ್ತರಷ್ಟು ಪ್ಲಾಸ್ಟಿಕ್ಗಳು ಬರುತ್ತಿದ್ದು, ಅದನ್ನು ಪಾಲಿಕೆ ವಾಹನಕ್ಕೇ ಒಣಕಸ ಸಂಗ್ರಹ ಘಟಕಗಳು ನೀಡುತ್ತಿವೆ. ಬಿಬಿಎಂಪಿ ಶೇಖರಣೆ ವ್ಯವಸ್ಥೆ ಮಾಡದೆ ಇದ್ದರೆ ಲ್ಯಾಂಡ್ ಫಿಲ್ಗಳಿಗೆ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ಗಳು ತುಂಬಿಹೋಗುವ ಅಪಾಯ ಎದುರಾಗಿದೆ. ಹಾಲಿನ ಪ್ಯಾಕೆಟ್, ಕೆಲ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ತ್ಯಾಜ್ಯಗಳ ಬೆಲೆಯೂ ಇಳಿಕೆಯಾಗಿದ್ದು, ಮರುಬಳಕೆ ಮಾಡಲು ಬೇರೆ ದಾರಿಗಳನ್ನು ಹುಡುಕಬೇಕಿದೆ ಎಂದರು.