ಬೆಂಗಳೂರು: ಲಾಕ್ಡೌನ್ ಸಡಿಲಿಕೆ ಮಾಡಿ ಎಲ್ಲಾ ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾಗಬೇಕೆಂದು ಸರ್ಕಾರ ಆದೇಶ ಹೊರಡಿಸಿತು. ಆದೇಶದ ಪ್ರಕಾರ ಎಲ್ಲಾ ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳು ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಇವರಿಗೆ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳುವಲ್ಲಿ ಎಡವಿರುವುದು ಕಂಡು ಬಂದಿದೆ.
ಕೊರೊನಾ ಸಂಬಂಧ ಕೆಲವೇ ಕೆಲವು ಇಲಾಖಾ ಅಧಿಕಾರಿಗಳಿಗೆ ಕೆಲಸಕ್ಕೆ ಹಾಜರಾಗುವಂತೆ ಸರ್ಕಾರ ಸೂಚಿಸಿತ್ತು. ಅದರಂತೆ ಅಧಿಕಾರಿಗಳು, ಸಿಬ್ಬಂದಿ ತಮ್ಮ ತಮ್ಮ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಆದ್ರೆ ಸರ್ಕಾರದ ಮಾರ್ಗಸೂಚಿಯನ್ವಯ ನಿಯಮಗಳನ್ನು ಅನುಸರಿಸದೆ, ಸರ್ಕಾರಿ ವಾಹನದಲ್ಲಿ ಸಿಬ್ಬಂದಿಯನ್ನು ಕುರಿ ಮಂದೆಯಂತೆ ತುಂಬಿಕೊಂಡು ಕಚೇರಿಗೆ ಕರೆತರಲಾಗುತ್ತಿದೆ.
ವಿಧಾನಸೌಧ, ವಿಕಾಸಸೌಧ, ಎಂ ಎಸ್ ಬಿಲ್ಡಿಂಗ್ ಸೇರಿದಂತೆ ಕೆಲವೇ ಕಚೇರಿಗಳ ಮುಖ್ಯ ದ್ವಾರದಲ್ಲಿ ಥರ್ಮಲ್ ಸ್ಕ್ಯಾನರ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಆದರೆ ಕಚೇರಿಗಳಲ್ಲಿ ಸಾಮಾಜಿಕ ಅಂತರ ಪಾಲಿಸುತ್ತಿಲ್ಲ. ಇನ್ನು ಕೆಲ ಕಚೇರಿಗಳ ಮುಖ್ಯ ದ್ವಾರದಲ್ಲಿ ಥರ್ಮಲ್ ಸ್ಕ್ಯಾನರ್ ಆಗಲಿ, ಸ್ಯಾನಿಟೈಸರ್ ವ್ಯವಸ್ಥೆ ಇಲ್ಲ. ಯಾವುದೇ ಸುರಕ್ಷತಾ ಕ್ರಮಗಳಿಲ್ಲ ಎಂದು ಅಲ್ಲಿನ ಸಿಬ್ಬಂದಿಯೇ ಬೇಸರ ವ್ಯಕ್ತಪಡಿಸುತ್ತಾರೆ.
ಮನೆಯಿಂದ ಕಚೇರಿಗೆ ಬಂದು ವಾಪಸ್ ಹೋಗುವಾಗ ಎಲ್ಲಿ ಕೊರೊನಾ ವೈರಸ್ ತೆಗೆದುಕೊಂಡು ಹೋಗುತ್ತೇವೊ ಎಂಬ ಭಯ ಕಾಡುತ್ತಿದೆ. ಕಚೇರಿಗೆ ಒಳ, ಹೊರಗೆ ಬಂದು ಹೋಗುವವರಿಗೆ ಯಾವುದೇ ರೀತಿಯ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿಲ್ಲ ಎಂದು ವಿಧಾನಸೌಧದಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.