ಬೆಂಗಳೂರು: ಯಾವುದೇ ಧರ್ಮವನ್ನು ಪ್ರತಿಪಾದಿಸುವಾಗ ಮತ್ತೊಂದು ಧರ್ಮವನ್ನು ಕೀಳಾಗಿ ಬಿಂಬಿಸುವ ಮೂಲಭೂತ ಹಕ್ಕನ್ನು ಯಾವ ಧರ್ಮಕ್ಕೂ ಪ್ರದಾನ ಮಾಡಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಪ್ರಕರಣದಲ್ಲಿ ಬಂಟ್ವಾಳ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿರುವ ಕ್ರಮವನ್ನು ರದ್ದುಗೊಳಿಸಬೇಕು ಎಂದು ಕೋರಿ ಬಂಟ್ವಾಳದ ಪ್ರೆಸಿಲ್ಲಾ ಡಿಸೋಜ ಹಾಗೂ ಮಂಗಳೂರಿನ ಸ್ಯಾಮ್ಸನ್ ಜಾನ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ, ಎಚ್ ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಆರೋಪಿತರ ವಿರುದ್ಧ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪವಿದೆ. ಭಗವದ್ಗೀತೆ ಹಾಗೂ ಕುರಾನ್ನಲ್ಲಿ ಹೇಳಿರದ ವಿಷಯಗಳನ್ನು ಬೈಬಲ್ನಲ್ಲಿ ಹೇಳಿದ್ದು, ಭೂಮಿಗೆ ಸುನಾಮಿ ಬಂದಾಗ ಏಸು ಮಾತ್ರ ಕಾಪಾಡುತ್ತಾರೆ. ಬೈಬಲ್ ಅಷ್ಟೇ ಶಾಂತಿ ನೀಡುತ್ತದೆ ಎಂದಿದ್ದಾರೆ ಎನ್ನಲಾಗಿದೆ.
ಆರೋಪಿತರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 298ರಡಿ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಅರ್ಜಿದಾರರು ಈ ಕ್ರಮವನ್ನು ಸಾಂವಿಧಾನದ ವಿಧಿ 14, 21 ಹಾಗೂ 25ರ ಉಲ್ಲಂಘನೆ ಎಂದು ಪ್ರತಿಪಾದಿಸಿದ್ದಾರೆ. ಯಾವುದೇ ಧರ್ಮದ ಕುರಿತು ಧಾರ್ಮಿಕ ಮುಖಂಡ ಅಥವಾ ವ್ಯಕ್ತಿ ಪ್ರತಿಪಾದಿಸುವಾಗ ಮತ್ತೊಂದು ಧರ್ಮವನ್ನು ಕೀಳಾಗಿ ಬಿಂಬಿಸುವ ಹಕ್ಕನ್ನು ಮೂಲಭೂತ ಹಕ್ಕುಗಳಲ್ಲಿ ನೀಡಲಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ :
ಪ್ರೆಸಿಲ್ಲಾ ಹಾಗೂ ಮತ್ತೋರ್ವ ವ್ಯಕ್ತಿ 2016ರ ಡಿಸೆಂಬರ್ 6ರ ಸಂಜೆ 5 ಗಂಟೆ ಸುಮಾರಿಗೆ ವೆಬ್ಸೈಟ್ ಬಗ್ಗೆ ಮಾಹಿತಿ ನೀಡುವುದಾಗಿ ಪರಿಚಯಿಸಿಕೊಂಡು ನಮ್ಮ ಮನೆಗೆ ಬಂದರು. ಟ್ಯಾಬ್ನಲ್ಲಿ ಕೆಲ ವಿಡಿಯೋಗಳನ್ನು ತೋರಿಸಿ ಬೈಬಲ್ ಬಗ್ಗೆ ಉಪದೇಶಿಸಿದರು. ಸಮಾಜ ಹದಗೆಟ್ಟಿದೆ, ಭೂಮಿಗೆ ಭವಿಷ್ಯವಿಲ್ಲ. ಹೀಗಾಗಿ ನಾವೆಲ್ಲರೂ ಒಂದುಗೂಡಬೇಕಿದೆ ಎಂದು ಕರ ಪತ್ರ ನೀಡಿದರು. ಅದರಲ್ಲಿ ಬೈಬಲ್ ಬಗ್ಗೆ ಮಾಹಿತಿ ಇತ್ತು. ಇದನ್ನು ಪ್ರಶ್ನಿಸಿ ನೀವೇಕೆ ಭಗವದ್ಗೀತೆ ಅಥವಾ ಕುರಾನ್ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂದಾಗ ಬೈಬಲ್ ಮಾತ್ರ ಭೂಮಿಯ ಭವಿಷ್ಯ ಹೇಳುತ್ತದೆ. ಬೇರೆ ಯಾವುದೇ ಧರ್ಮಗಳು ಹೇಳುವುದಿಲ್ಲ. ಸುನಾಮಿ ಬಂದಾಗ ಏಸು ಕಾಪಾಡುತ್ತಾರೆ. ಬೇರೆ ಯಾವ ಧರ್ಮಗಳೂ ರಕ್ಷಿಸುವುದಿಲ್ಲ ಎಂದು ಹೇಳಿದರು. ಈ ಮೂಲಕ ಮತಾಂತರಕ್ಕೆ ಯತ್ನಿಸಿದರು ಎಂದು ಆರೋಪಿಸಿ ಮಧುರಾ ಎಂಬುವವರು ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ತನಿಖೆ ನಡೆಸಿದ ಬಂಟ್ವಾಳ ಠಾಣೆ ಪೊಲೀಸರು ಸ್ಥಳೀಯ ಜೆಎಂಎಫ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಆ ಮೇರೆಗೆ ನ್ಯಾಯಾಲಯ 2020ರ ಜೂನ್ 8ರಂದು ಆರೋಪಿಗಳ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು.
ಇದನ್ನು ಓದಿ: ಶಿರೂರು ಮಠದ ಆಸ್ತಿ ವಿವಾದ : ಸೋದೆ ಶ್ರೀಗಳ ವಿರುದ್ಧದ ಅರ್ಜಿ ವಜಾ