ಬೆಂಗಳೂರು: ರಾಜ್ಯದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿಲ್ಲ, ಪವರ್ ಕಟ್ ಮಾಡಲಾಗುತ್ತಿದೆ ಎಂದು ಸುಮ್ಮನೆ ಸುದ್ದಿ ಆಗುತ್ತಿದೆ ಎಂದು ಇಂಧನ ಸಚಿವ ಕೆ. ಜೆ ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ಮಲ್ಲೇಶ್ವರಂ 15 ನೇ ಅಡ್ಡ ರಸ್ತೆಯ ಸಮೀಪ ಬೆಂಗಳೂರು ವಿದ್ಯುತ್ ಕಂಪನಿ ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ, ದೇಶದಲ್ಲಿಯೇ ಮೊದಲ ಭೂಗತ ವಿದ್ಯುತ್ ಪರಿವರ್ತಕ ಕೇಂದ್ರವನ್ನು ಇಂಧನ ಸಚಿವ ಕೆ. ಜೆ. ಜಾರ್ಜ್ ಉದ್ಘಾಟಿಸಿದರು.
ನಂತರ ಮಾತನಾಡಿದ ಜಾರ್ಜ್, ರಾಜ್ಯದಲ್ಲಿ ಪವರ್ ಕಟ್ ಮಾಡಿಲ್ಲ, ಆ ರೀತಿ ಸುಮ್ಮನೆ ಸುದ್ದಿ ಆಗುತ್ತಿದೆ ಅಷ್ಟೆ. ಬೇಸಿಗೆಗೆ ಬೇಕಾಗುವಷ್ಟು ವಿದ್ಯುತ್ ಸಂಗ್ರಹ ಈಗಾಗಲೇ ಇದೆ. ಥರ್ಮಲ್ ವಿದ್ಯುತ್ ಘಟಕ ದುರಸ್ತಿಯಲ್ಲಿದೆ. ಆದಾಗ್ಯೂ ಈಗ ಮಳೆ ಹೆಚ್ಚಾಗಿದ್ದು, ಇದರಿಂದ ವಿದ್ಯುತ್ ಉತ್ಪಾದನೆ ಕೂಡ ಹೆಚ್ಚಾಗಿದೆ. ಇಂದು ನಿಗದಿಗಿಂತ 100 ಯುನಿಟ್ ವಿದ್ಯುತ್ ಉತ್ಪಾದನೆ ಹೆಚ್ಚಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಡಾ. ಸಿ. ಎನ್. ಅಶ್ವತ್ಥ ನಾರಾಯಣ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಬೆವಿಕಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ, ಹಣಕಾಸು ನಿರ್ದೇಶಕ ದರ್ಶನ್ ಜೆ, ತಾಂತ್ರಿಕ ನಿರ್ದೇಶಕ ರಮೇಶ್ ಹೆಚ್. ಜೆ, ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಲಯ ಆಯುಕ್ತ ಡಾ. ದೀಪಕ್, ಬೆವಿಕಂ ಹಾಗೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಪವರ್ ಕಟ್ ವಿರುದ್ಧ ಬಿಜೆಪಿ ಕಿಡಿ: ವಿದ್ಯುತ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಘೋಷಿತ ಲೋಡ್ ಶೆಡ್ಡಿಂಗ್ ರಾಜ್ಯಾದ್ಯಂತ ಇದೆ. ಇಂಥ ಪರಿಸ್ಥಿತಿ ನಿರ್ಮಾಣ ಆಗಿರುವುದು ದುರಂತ ಎಂದು ಮಾಜಿ ಇಂಧನ ಸಚಿವ ಟಿ. ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರ ಯಾವುದೇ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ರಾಜ್ಯದ ವಿದ್ಯುತ್ ಬೇಡಿಕೆಯನ್ನು ಅರ್ಥ ಮಾಡಿಕೊಂಡಿಲ್ಲ. ಉತ್ಪಾದನೆ ಕೂಡ ಕುಸಿದಿದ್ದು, ಜನರ ಮೇಲೆ ಹೊರೆ ಬಿದ್ದಿದೆ. ಗ್ರಾಮೀಣ ಭಾಗದಲ್ಲಿ 2-3 ಗಂಟೆ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ. 'ಕತ್ತಲೆಯತ್ತ ಕರ್ನಾಟಕ'ಕ್ಕೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಗಸ್ಟ್ ತಿಂಗಳಲ್ಲೇ 2-3 ಗಂಟೆ ಲೋಡ್ ಶೆಡ್ಡಿಂಗ್ ಮಾಡಿದರೆ, ಇಡೀ ರಾಜ್ಯ ಕಗ್ಗತ್ತಲೆ ಕಡೆ ಹೋಗುವುದು ನಿಶ್ಚಿತ. ಅಸಮರ್ಥ ನಿರ್ವಹಣೆಯಿಂದ ಕರ್ನಾಟಕ ಕಗ್ಗತ್ತಲೆಯತ್ತ ಹೋಗಿದೆ ಎಂದು ಕಿಡಿಕಾರಿದ ಅವರು, 16,954 ಮೆಗಾ ವ್ಯಾಟ್ ಬೇಡಿಕೆ ಮೊದಲೇ ಬಂದಿತ್ತು. ಇದನ್ನು ಅಂದಾಜು ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಆಗಸ್ಟ್ನಲ್ಲೇ ಈ ತರದ ಬೇಡಿಕೆ ಇದ್ದರೆ, ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ. ಥರ್ಮಲ್ ಪಾಯಿಂಟ್ ಎಷ್ಟು ಉತ್ಪಾದನೆ ಆಗಬೇಕಿತ್ತೋ ಅಷ್ಟು ಆಗಿಲ್ಲ. ವಿದ್ಯುತ್ ಇಲಾಖೆಯಲ್ಲಿ ಅರಾಜಕತೆಯನ್ನು ಸೃಷ್ಟಿ ಮಾಡಿದೆ ಸರ್ಕಾರ. ಗೃಹ ಜ್ಯೋತಿ ಬಗ್ಗೆ ಜಾಹೀರಾತಿನಲ್ಲಿ 200 ಯುನಿಟ್ ಉಚಿತ ಎನ್ನುತ್ತಿದ್ದಾರೆ. ಯಾವ ಗ್ರಾಹಕರಿಗೂ ಉಚಿತ ವಿದ್ಯುತ್ 200 ಯುನಿಟ್ ಸಿಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅನ್ನದಾತನ ಐಪಿ ಸೆಟ್ಗಳಿಗೆ 7 ಗಂಟೆ ಉಚಿತ ವಿದ್ಯುತ್ ಕಡಿತಗೊಳಿಸಿದೆ. ಅದರಲ್ಲಿ ಉಳಿದ ವಿದ್ಯುತ್ ಗೃಹ ಜ್ಯೋತಿಗೆ ಸರಿಹೊಂದಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ರೈತನಿಗೆ ಕೇವಲ 2-3 ಗಂಟೆ ಮಾತ್ರ ವಿದ್ಯುತ್ ನೀಡುತ್ತಿದ್ದಾರೆ. ಗೃಹ ಜ್ಯೋತಿಯೂ ವಿಫಲವಾಗಿದೆ. ನಿರ್ವಹಣೆಯೂ ವಿಫಲವಾಗಿದೆ. ಮನೆಗೂ ವಿದ್ಯುತ್ ಇಲ್ಲ, ರೈತನಿಗೂ ವಿದ್ಯುತ್ ಇಲ್ಲ. ಕತ್ತಲೆಯ ದಿನಗಳು ಇಂದಿನಿಂದ ಪ್ರಾರಂಭವಾಗಿದೆ. ಆಗಸ್ಟ್ ತಿಂಗಳಲ್ಲಿ 591 ಮಿಲಿಯನ್ ಯುನಿಟ್ ಖರೀದಿ ಮಾಡಲಾಗಿದೆ. 8-10 ರೂ. ಕೊಟ್ಟು ವಿದ್ಯುತ್ ಖರೀದಿ ಆಗುತ್ತಿದೆ. ಪೂರ್ವ ಸಿದ್ಧತೆ ಮಾಡಿಕೊಂಡಿದ್ದರೆ 4-5 ರೂ. ಗೆ ವಿದ್ಯುತ್ ಖರೀದಿ ಮಾಡಬಹುದಿತ್ತು. ಕೈಗಾರಿಕೆಗಳಿಗೂ ವಿದ್ಯುತ್ ಕಡಿತಗೊಳಿಸಲಾಗಿದ್ದು, ಕೈಗಾರಿಕೆ ಉದ್ಯಮಿಗಳು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.
ರಿಪಬ್ಲಿಕ್ ಆಫ್ ಭಾರತ್ ನಾಮಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರದ ನಿರ್ಧಾರ ಸ್ವಾಗತಿಸುತ್ತೇವೆ. ಹಿಂದೂ ರಾಷ್ಟ್ರ ಎಂದು ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೋ, ಅದೇ ರೀತಿ ಭಾರತ ಎಂಬುದಕ್ಕೂ ಕಿಚ್ಚಿದೆ. ಭಾರತ ಎಂದು ಕರೆಯುವುದಕ್ಕೆ ಖುಷಿಯಾಗುತ್ತದೆ ಎಂದರು.
ಇದನ್ನೂ ಓದಿ : ಆಗಸ್ಟ್ನಲ್ಲಿ ದೇಶದ ವಿದ್ಯುತ್ ಬೇಡಿಕೆ ಶೇ 16ರಷ್ಟು ಏರಿಕೆ; 151 ಬಿಲಿಯನ್ ಯೂನಿಟ್ ಬಳಕೆ