ಬೆಂಗಳೂರು: ಒಂದರಿಂದ ಏಳನೇ ತರಗತಿಯವರೆಗೆ ಆನ್‌ಲೈನ್ ತರಗತಿ ನಡೆಸದಿರಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ. ಇಂದು ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
1 ರಿಂದ 7ನೇ ತರಗತಿವರೆಗೆ ಆನ್‌ಲೈನ್ ತರಗತಿಗಳು ನಡೆಯುವುದಿಲ್ಲ. ಇದು ಸಂಪುಟದ ತೀರ್ಮಾನವಾಗಿ ಇದ್ದು, ಕೂಡಲೇ ಶಿಕ್ಷಣ ಇಲಾಖೆಯ ಮೂಲಕ ಈ ಮಾಹಿತಿಯನ್ನು ತಲುಪಿಸಲಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ಐದನೇ ತರಗತಿಯವರೆಗೆ ಆನ್‌ಲೈನ್ ತರಗತಿ ನಡೆಸಬಾರದು ಎಂದು ಇದಕ್ಕೂ ಮುನ್ನ ತೀರ್ಮಾನಿಸಲಾಗಿತ್ತು. ಶಿಕ್ಷಣ ಇಲಾಖೆ ಕೈಗೊಂಡಿದ್ದ ತೀರ್ಮಾನ ಎಂದು ಚರ್ಚಿಸಿದ ತರಗತಿವರೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ನಿಗದಿಪಡಿಸಿರುವ ದಿನಾಂಕದಂದೇ ಎಸ್ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಯಾವುದೇ ಕಾರಣಕ್ಕೂ ದಿನಾಂಕ ಬದಲಿಸುವ ಇಲ್ಲವೇ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿಲ್ಲ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬೇರೆ ರಾಜ್ಯಗಳಲ್ಲಿ ಪರೀಕ್ಷೆ ರದ್ದುಗೊಳಿಸಿರುವ ಮಾಹಿತಿ ಇದೆ. ಅದೇ ಮಾದರಿಯ ತೀರ್ಮಾನ ರಾಜ್ಯದಲ್ಲಿ ಕೈಗೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇಂತಹ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.