ಬೆಂಗಳೂರು: ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶದಲ್ಲಿ ಯಾವುದೇ ಆತಂಕ ಇಲ್ಲ. ರಾಜ್ಯದ ಜನರು, ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಕಾವೇರಿ ನೀರು ಪ್ರಾಧಿಕಾರದ ಆದೇಶ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಒಳಹರಿವು ಆಧಾರಿತವಾಗಿ ನೀರು ಬಿಡಲು ಹೇಳಿದ್ದಾರೆ. ಜೂನ್ ತಿಂಗಳಲ್ಲಿ ಉತ್ತಮ ಮಳೆಯಾದರೆ ಸಮಸ್ಯೆ ಆಗುವುದಿಲ್ಲ. ಇಲ್ಲವಾದರೆ ಸಂಕಷ್ಟ ಪರಿಸ್ಥಿತಿ ಸೂತ್ರ ಅನುಸರಿಸಬೇಕಾಗುತ್ತದೆ ಎಂದಿದ್ದಾರೆ.
ಮಳೆ ಒಳಹರಿವು ಆಧರಿಸಿ ನೀರು ಕೊಡಲು ಸೂಚಿಸಿದ್ದಾರೆ. ಸ್ವಾಭಾವಿಕ ವರ್ಷದಲ್ಲಿ ನೀರು ಕೊಟ್ಟೇ ಕೊಡುತ್ತೇವೆ. ಬೇರೆ ಸಮಯದಲ್ಲಿ ಸಂಕಷ್ಟ ನಿರ್ವಹಣಾ ಸೂತ್ರದಂತೆ ನಡೆದುಕೊಳ್ಳುತ್ತೇವೆ. ದೇವರಲ್ಲಿ ಉತ್ತಮ ಮಳೆಯಾಗುವಂತೆ ಪ್ರಾರ್ಥನೆ ಮಾಡೋಣ. ತೀರ್ಪಿನ ಕುರಿತಾಗಿ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ. ಸ್ವಾಭಾವಿಕ ವರ್ಷದಲ್ಲಿ ನೀರು ಕೊಡಲ್ಲ ಅಂದರೆ ತಪ್ಪಾಗುತ್ತೆ. ಒಳಹರಿವು ಉತ್ತಮವಾದರೆ ನೀರು ಕೊಡ್ತೀವಿ. ಮಂಡ್ಯದ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಇನ್ನು ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ರಾಜಕಾರಣ ಪ್ರವೇಶಿಸುವ ಮನಸ್ಸು ಹೊಂದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಕ್ಕೆ ತಯಾರಿ ನಡೆಸಲು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡೋದು ಅವರ ಅಧಿಕಾರ. ರಾಜೀನಾಮೆ ನೀಡುವ ಮುನ್ನ ನನ್ನ ಬಳಿ ಬಂದು ಚರ್ಚೆ ನಡೆಸಿದ್ದರು ಎಂದು ಹೇಳಿದರು.