ಬೆಂಗಳೂರು: ಶರಾವತಿ ನದಿಯ ನೀರನ್ನು ಲಿಂಗನಮಕ್ಕಿ ಅಣೆಕಟ್ಟೆಯಿಂದ ಬೆಂಗಳೂರಿಗೆ ತರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮಲೆನಾಡಿನ ವಕೀಲರು ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸಿದರು.
ಮಲೆನಾಡು (ಪಶ್ಚಿಮ ಘಟ್ಟ) ಹೆಬ್ಬಾಗಿಲು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಜನರ ಗಮನಕ್ಕೆ ತರದೆ, ಅವರ ಅಭಿಪ್ರಾಯ ಪಡೆಯದೆ ಶರಾವತಿ ನೀರನ್ನು ಬೆಂಗಳೂರಿಗೆ ಹರಿಸುವ ನಿರ್ಧಾರ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಹೈಕೋರ್ಟ್ ಹಿರಿಯ ವಕೀಲ ದಿವಾಕರ್ ಮಾತನಾಡಿ, ಈ ಯೋಜನೆ ಜಾರಿಗೆ ಬಂದರೆ ಶರಾವತಿ ಕೆಳ ಭಾಗದಲ್ಲಿ ನೀರಿನ ಹರಿವು ಕಡಿಮೆಯಾಗಿ ಗೇರುಸೊಪ್ಪೆ ಡ್ಯಾಂನಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಹೊನ್ನಾವರ ತಾಲೂಕಿನ ಸುಮಾರು 1 ಸಾವಿರ ಎಕರೆ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಮೀನುಗಾರಿಕೆಗೆ ಆಪತ್ತು ಬರಲಿದೆ. ಸುಮಾರು 400 ಕಿ.ಮೀ.ನಿಂದ ಬೆಂಗಳೂರಿಗೆ ನೀರು ತರುವುದು ಮೂರ್ಖತನ. ಆದ್ದರಿಂದ ಈ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು ಎಂದರು.