ಬೆಂಗಳೂರು: ಕೊರೊನಾ ಸೋಂಕಿತರಿಗೆ ಆ್ಯಂಬುಲೆನ್ಸ್ ಇಲ್ಲ ಎಂದು ಖಾಸಗಿ ವಾಹನದ ವ್ಯವಸ್ಥೆ ಮಾಡಿಲ್ಲ. ರೋಗ ಲಕ್ಷಣ ಇಲ್ಲದವರನ್ನು ಕೋವಿಡ್ ಕೇರ್ ಸೆಂಟರ್ಗೆ ಕಳುಹಿಸಲು ಆ್ಯಂಬುಲೆನ್ಸ್ ಅಗತ್ಯವಿಲ್ಲ. ಹಾಗಾಗಿ ಖಾಸಗಿ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸ್ಪಷ್ಟೀಕರಣ ನೀಡಿದ್ದಾರೆ.
ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿಎಂ ನಡೆಸಿದ ತುರ್ತು ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಹಾಗೂ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಉನ್ನತ ಮಟ್ಟದ ಅಧಿಕಾರಿಗಳು, ಸಚಿವರ ಸಭೆ ನಡೆಸಿದರು ಎಂದು ಸಭೆಯ ಮಾಹಿತಿ ಒದಗಿಸಿದರು.
ಯಾವ ರೀತಿ ಕ್ರಮ ತೆಗೆದುಕೊಳ್ಳಲಾಗಿದೆ. ಕೋವಿಡ್ ಕೇರ್ ಸೆಂಟರ್ಗಳಲ್ಲಿ ಎಷ್ಟು ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ 10 ಸಾವಿರಕ್ಕೂ ಹೆಚ್ಚಿನ ಹಾಸಿಗೆ ವ್ಯವಸ್ಥೆ ಉಳ್ಳ ಕೋವಿಡ್ ಕೇರ್ ಸೆಂಟರ್ನಲ್ಲಿ ಮೂಲ ಸೌಲಭ್ಯಗಳು ಯಾವ ರೀತಿ ನಡೆಯುತ್ತಿದೆ ಎಂದು ಸಿಎಂಗೆ ವಿವರಿಸಲಾಯಿತು ಎಂದರು.
ಬರೀ ಸೌಲಭ್ಯ ಒದಗಿಸುವುದು ಮಾತ್ರವಲ್ಲ. ಊಟೋಪಚಾರದ ವ್ಯವಸ್ಥೆ. ಶುಚಿತ್ವ ಕಾಪಾಡುವುದು. ಯಾವ ರೀತಿ ರಕ್ಷಣೆ ಒದಗಿಸುವುದು. ವೈದ್ಯರು, ಆರೋಗ್ಯ ಸಿಬ್ಬಂದಿ ಎಷ್ಟು ಜನ ಇರಬೇಕು ಎನ್ನುವುದು ಸೇರಿ ಎಲ್ಲ ರೀತಿಯ ಚರ್ಚೆಯನ್ನ ಸಭೆಯಲ್ಲಿ ನಡೆಸಲಾಯಿತು ಎಂದರು.
2 ಸಾವಿರ ಹಾಸಿಗೆ ಈಗಾಗಲೇ ಸಿದ್ದವಾಗಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಲಭ್ಯವಿದ್ದು, ಪ್ರತಿ ದಿನ 200 - 300 ಜನ ದಾಖಲಾಗುತ್ತಿದ್ದಾರೆ. ಅಷ್ಟೇ ಜನರು ಗುಣಮುಖರಾಗಿ ವಾಪಸ್ ಹೋಗುತ್ತಿದ್ದಾರೆ. ಸಿಎಂ ಇದನ್ನೆಲ್ಲ ಪರಾಮರ್ಶೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ತಂಡ ಸಲಹೆ ನೀಡಿದಂತೆ ಪರೀಕ್ಷೆ ಹೆಚ್ಚು ಮಾಡುವುದು. ಕಂಟೇನ್ಮೆಂಟ್ ಜೋನ್ ಮತ್ತಷ್ಟು ಬಿಗಿ ಮಾಡುವುದಕ್ಕೆ ಸಿಎಂ ಸೂಚನೆ ನೀಡಿದ್ದಾರೆ ಎಂದರು.
ಆ್ಯಂಬುಲೆನ್ಸ್ ಇಲ್ಲದೇ ಖಾಸಗಿ ವಾಹನದಲ್ಲಿ ಕೋವಿಡ್ ಸೋಂಕಿತರನ್ನು ಕರೆದೊಯ್ಯಲಾಗುತ್ತಿದೆ ಎನ್ನುವ ಆರೋಪ ಸರಿಯಲ್ಲ. ಕೋವಿಡ್ ಕೇರ್ ಸೆಂಟರ್ಗೆ ಹೋಗ ಬೇಕಾದವರಿಗೆ ಆ್ಯಂಬುಲೆನ್ಸ್ ಅಗತ್ಯವಿಲ್ಲ. ಹಾಗಾಗಿ ಟಿಟಿಯಲ್ಲಿ ಕರೆದೊಯ್ಯಲಾಗುತ್ತಿದೆ. ಜನರನ್ನು ಸಾಗಿಸಲು ಯಾವುದಾದರೂ ವಾಹನ ಸಾಕು. ಆ್ಯಂಬುಲೆನ್ಸ್ ಇಲ್ಲ ಎಂದು ನಾವು ಬೇರೆ ವಾಹನ ಮಾಡುತ್ತಿಲ್ಲ. ಯಾರಿಗೆ ರೋಗ ಲಕ್ಷಣ ಇರುವುದಿಲ್ಲವೋ ಅಂತಹವರಿಗೆ ಆ್ಯಂಬುಲೆನ್ಸ್ನ ಅವಶ್ಯಕತೆಯೂ ಇಲ್ಲ. ಹೀಗಾಗಿ ಅವರಿಗೆ ಬೇರೆ ವಾಹನ ವ್ಯವಸ್ಥೆ ಮಾಡಿದ್ದೇವೆ. ಇಲ್ಲಿಯವರೆಗೆ 400 ವಾಹನ ಮಾಡಿದ್ದೆವು. ಈಗ ಸಿಎಂ 100 ಹೆಚ್ಚುವರಿ ವಾಹನ ಸೇರ್ಪಡೆಗೆ ಸೂಚಿಸಿದ್ದು, ಇನ್ಮುಂದೆ 500 ವಾಹನ ಇರಲಿದೆ ಎಂದರು.
ಇನ್ಮುಂದೆ ಯಾರಿಗೆ ಕೊರೊನಾ ಪಾಸಿಟಿವ್ ಬರಲಿದೆಯೋ ಅವರಿಗೆ ವ್ಯವಸ್ಥೆ ಮಾಡಿ ಕರೆದೊಯ್ಯಲಾಗುತ್ತದೆ. ಮೊದಲು ಪಾಸಿಟಿವ್ ಬಂದ ಕೂಡಲೇ ಬಿಬಿಎಂಪಿ ವಾರ್ ರೂಂನಿಂದ ಕರೆ ಬರಲಿದೆ. ಎಲ್ಲಿಗೆ ಕರೆದೊಯ್ಯಲಾಗುತ್ತದೆ ಎನ್ನುವ ಮಾಹಿತಿ ನೀಡಲಾಗುತ್ತದೆ. ಅವ್ಯವಸ್ಥೆ ಆಗದೇ ವ್ಯವಸ್ಥಿತ ರೀತಿಯಲ್ಲಿ ಎಲ್ಲವನ್ನೂ ಮಾಡಲಾಗುತ್ತದೆ ಎಂದರು.
ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10 ಸಾವಿರ ಹಾಸಿಗೆ ಇದ್ದರೂ ಅಷ್ಟು ರೋಗಿಗಳು ಏಕಾಏಕಿ ಬರುವುದಿಲ್ಲ. ಕನಿಷ್ಠ 1000 ವೈದ್ಯರ ಅಗತ್ಯವಿದ್ದು, ಶಿಫ್ಟ್ ಮೇಲೆ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಇಂದು ವೈದ್ಯಕೀಯ ಇಲಾಖೆ ಸಭೆ ಕರೆದಿದ್ದೇನೆ. ಸಭೆಯಲ್ಲಿ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಲಾಕ್ಡೌನ್ ಸಡಿಲಿಕೆ ಆದ ನಂತರ ಸೋಂಕಿತರ ಸಂಖ್ಯೆ ಹೆಚ್ಚಾಗುವ ಮಾಹಿತಿ ಇತ್ತು. ಆದರೆ, ಇಷ್ಟು ಬೇಗ ಈ ಪ್ರಮಾಣದ ಏರಿಕೆ ಆಗಲಿದೆ ಎನ್ನುವ ಮಾಹಿತಿ ಇರಲಿಲ್ಲ. ಜುಲೈ ಅಂತ್ಯಕ್ಕೆ ಈ ಸಂಖ್ಯೆಯ ನಿರೀಕ್ಷೆ ಇತ್ತು. ಆದರೆ ಆರಂಭದಲ್ಲೇ ಬಂದಿದೆ. ಆದರೂ ಯಾರೂ ಆತಂಕ ಪಡಬೇಕಿಲ್ಲ. ಎಲ್ಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಸಣ್ಣಪುಟ್ಟ ನ್ಯೂನತೆಗಳಿವೆ. ಅದನ್ನೂ ಸರಿಪಡಿಸಿಕೊಳ್ಳಲಾಗುತ್ತದೆ. ಸೂಕ್ತ ವ್ಯವಸ್ಥೆ ಕಲ್ಪಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಬೆಂಗಳೂರಿನಿಂದ ವಾಪಸ್ ಹೋದವರನ್ನು, ಕೆಲವು ಕಡೆ ಗ್ರಾಮ ಪ್ರವೇಶಕ್ಕೆ ಅವಕಾಶ ನೀಡದಿರುವ ಘಟನೆಗಳ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ನಾವು ಸೋಂಕಿನ ವಿರುದ್ಧ ಹೋರಾಟ ಮಾಡಬೇಕೇ ಹೊರತು ಸೋಂಕಿತರ ವಿರುದ್ಧ ಅಲ್ಲ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.