ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ತನ್ನ ನಿರ್ಮಾಣದ ಫ್ಲ್ಯಾಟ್‌ಗಳಿಂದ ಸಾವಿರಾರು ಕೋಟಿ ನಷ್ಟದ ಭೀತಿ ಎದುರಿಸುತ್ತಿದೆ. ನಗರದ ಹೊರವಲದಲ್ಲಿರುವ 1600 ವಸತಿ ಸಮುಚ್ಚಯಗಳಿಂದ ಪ್ರಾಧಿಕಾರಕ್ಕೆ ಬರೋಬ್ಬರಿ 1200 ಕೋಟಿ ರೂ.ನಷ್ಟವಾಗುವ ಆತಂಕ ಎದುರಾಗಿದೆ.
ಬೆಂಗಳೂರನ್ನು ಅಭಿವೃದ್ಧಿ ಪಡಿಸಲೆಂದು ಸರ್ಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಹುಟ್ಟು ಹಾಕಿತ್ತು. ಅಂತಹ ಬಿಡಿಎ ನಿರ್ಮಾಣ ಮಾಡಿರುವ ಮನೆಗಳಿಗೀಗ ಡಿಮ್ಯಾಂಡ್ ಇಲ್ಲದಂತಾಗಿದೆ.
ಬಿಡಿಎ ನಿರ್ಮಾಣ ಮಾಡಿರುವ ಮನೆಗಳನ್ನು ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಕಳಪೆ ಕಾಮಗಾರಿ ಹಾಗೂ ಸೂಕ್ತ ರೀತಿಯಲ್ಲಿ ಸೌಕರ್ಯ ಕಲ್ಪಿಸದಿರುವುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಸಾವಿರಾರು ಕೋಟಿ ಖರ್ಚು ಮಾಡಿ ಬಿಡಿಎ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡುತ್ತದೆ. ನಂತರ ಅದನ್ನು ಜನರಿಗೆ ಮಾರಾಟ ಮಾಡುವ ಕೆಲಸ ಮಾಡಬೇಕಿತ್ತು. ಆದರೆ, ಜನರು ಬಿಡಿಎ ನಿರ್ಮಾಣ ಮಾಡಿರುವ ಫ್ಲ್ಯಾಟ್‌ಗಳನ್ನು ಖರೀದಿಸಲು ಮುಂದೆ ಬರುತ್ತಿಲ್ಲ. ಇಂತಹ ಸಾವಿರಾರು ಸಮುಚ್ಚಯಗಳು ಮಾರಾಟವಾಗದೆ, ಇದೀಗ ಸಾವಿರಾರು ಕೋಟಿ ರೂ. ನಷ್ಟದ ಭೀತಿ ಎದುರಿಸುತ್ತಿವೆ.
ಇದನ್ನೂ ಓದಿ: 'ಹಿಜಾಬ್ ಹೆಸರಿನಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶ ಕೊಡಿಸಲಿ'
ಜನರು ಮನಸ್ಸು ಮಾಡುತ್ತಿಲ್ಲ : ರಾಜಧಾನಿಯ ಹೊರ ಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ಫ್ಲ್ಯಾಟ್‌ಗಳನ್ನು ಕೊಂಡುಕೊಳ್ಳಲು ಜನರು ಮನಸ್ಸು ಮಾಡುತ್ತಿಲ್ಲ. ಕೊಮ್ಮಘಟ್ಟ, ಆಲೂರು, ವಲ್ಲಗೇರಿಹಳ್ಳಿ, ಕಣ್ಮಿಣಿಕೆ, ಗುಂಜೂರು ಸೇರಿ ಹಲವು ಕಡೆ ಇರುವ ಬಿಡಿಎ ಫ್ಲ್ಯಾಟ್ಗಳಿಗಳಿಗೆ ಡಿಮ್ಯಾಂಡ್ ಇಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೇಡಿಕೆ ಇಲ್ಲದಿದ್ದರೂ ಕಮಿಷನ್ ದುರಾಸೆಗೆ ಫ್ಲ್ಯಾಟ್ ನಿರ್ಮಾಣ : ಬೇಡಿಕೆ ಇಲ್ಲದಿದ್ದರೂ, ಕಮಿಷನ್ ದುರಾಸೆಗೆ ಬಿದ್ದು ಪ್ರಾಧಿಕಾರ ಫ್ಲ್ಯಾಟ್ ನಿರ್ಮಾಣ ಮಾಡಿದೆ. ಹೀಗಾಗಿ, ಖಾಸಗಿ ಏಜೆನ್ಸಿ ಮೂಲಕ ಜಾಹೀರಾತು ನೀಡಿ ಫ್ಲ್ಯಾಟ್ ಸೇಲ್ ಮಾಡುವ ಬಿಡಿಎ ಯೋಜನೆಗೆ ಹಿನ್ನೆಡೆಯಾಗಿದೆ. ಈ ಎಲ್ಲಾ ಕಾರಣದಿಂದ ಹಲವು ವರ್ಷಗಳಿಂದ ಮಾರಟವಾಗದೇ ಹಾಗೆಯೇ ಫ್ಲ್ಯಾಟ್‌ಗಳು ಉಳಿದಿವೆ ಎಂದು ಸಮಾಜಿಕ ಕಾರ್ಯಕರ್ತರು ತಿಳಿಸಿದ್ದಾರೆ.
ಬಿಡಿಎ ಫ್ಲ್ಯಾಟ್‌ಗಳಲ್ಲಿ ಬಿರುಕು : ನಗರದ ಹೊರವಲದಲ್ಲಿರುವ ಕೊಮ್ಮಘಟ್ಟದ ಬಿಡಿಎ ಅಪಾರ್ಟ್ಮೆಂಟ್‌ನಲ್ಲಿ ಒಟ್ಟು 1700ಕ್ಕೂ ಅಧಿಕ ಮನೆಗಳಿವೆ. 2015ರಲ್ಲಿ ಕೆಲಸ ಪೂರ್ಣಗೊಂಡು ಮಾರಾಟಕ್ಕೆ ಇಡಲಾಗಿತ್ತು. 7 ವರ್ಷವಾದರೂ 100 ರಿಂದ 120 ಫ್ಲ್ಯಾಟ್‌ಗಳು ಮಾತ್ರ ಮಾರಾಟವಾಗಿವೆ.
ನಿರ್ಮಾಣವಾಗಿ ಮಾರಾಟವಾಗದ ಮನೆಗಳ ಗೋಡೆಗಳಲ್ಲಿ ಈಗಾಗಲೇ ಬಿರುಕು ಕಾಣಿಸಿದೆ. 7 ವರ್ಷಗಳಿಂದ ವಾಸಿಸುತ್ತಿರುವ ಫ್ಲ್ಯಾಟ್‌ಗಳ ಗೋಡೆಗಳೂ ಬಿರುಕು ಬಿಟ್ಟಿವೆ. ಮುಖ್ಯ ರಸ್ತೆಯಿಂದ 7 ಕಿ.ಮೀ ದೂರದಲ್ಲಿ ಇರುವುದರಿಂದ ಮನೆಕೊಳ್ಳಲು ಜನರು ನಿರುತ್ಸಾಹ ತೋರುತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.