ಬೆಂಗಳೂರು: ಬ್ಯಾಂಕ್ ಉದ್ಯೋಗಿಯೊಬ್ಬರು ತಾನು ಮಾಡಿದ್ದ ಗೃಹ ಸಾಲದ ಬಾಕಿಯನ್ನು ಆತನ ಗ್ರಾಚ್ಯುಯಿಟಿ ಹಣದಿಂದ ಕಡಿತ ಮಾಡಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ದುರ್ನಡತೆಯ ಆರೋಪದಡಿ ರಾಷ್ಟ್ರೀಕೃತ ಬ್ಯಾಂಕ್‌ನ ಗುಮಾಸ್ತರೊಬ್ಬರು ಕಡ್ಡಾಯ ನಿವೃತ್ತಿ ಶಿಕ್ಷೆಗೆ ಒಳಪಟ್ಟಿದ್ದರು. ಆದರೆ, ಅದೇ ಬ್ಯಾಂಕ್‌ನಲ್ಲಿ ಪಡೆದುಕೊಂಡಿದ್ದ ಗೃಹ ಸಾಲಕ್ಕೆ ಅವರ ಗ್ರಾಚ್ಯುಯಿಟಿ ಹಣವನ್ನು ಕಡಿತ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದರು. ಇದನ್ನು ಪ್ರಶ್ನಿಸಿ ನೌಕರ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಪ್ರಾಧಿಕಾರ ಸಾಲದ ಮೊತ್ತಕ್ಕೆ ಗ್ರಾಚ್ಯುಯಿಟಿ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಇಲ್ಲ ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಬ್ಯಾಂಕ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರ ಬ್ಯಾಂಕ್‌ನ ಕ್ರಮವನ್ನು ರದ್ದುಪಡಿಸಿದ್ದಾರೆ.
ಗೃಹ ಸಾಲವು 'ಸಾಲ ಒಪ್ಪಂದ ನಿಯಮ'ಗಳ ನಿಯಂತ್ರಣದಲ್ಲಿರುತ್ತದೆ. ಸಾಲವು ಬ್ಯಾಂಕ್ ಮತ್ತು ಸಾಲಗಾರನ ನಡುವಿನ ವಾಣಿಜ್ಯ ವ್ಯವಹಾರ. ಆದರೆ, ಉದ್ಯೋಗಿ ಕಲ್ಯಾಣ ನಿಧಿಯು 'ಸೇವಾ ಷರತ್ತು'ಗಳ ವ್ಯಾಪ್ತಿಗೆ ಒಳಪಟ್ಟಿದ್ದು, ಗ್ರಾಚ್ಯುಯಿಟಿ ಹಣವನ್ನು ಸಾಲದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
ಪ್ರಕರಣದಲ್ಲಿ ಗೃಹ ಸಾಲ ಮೊತ್ತ ಮರು ಪಾವತಿಸುವಂತೆ ಉದ್ಯೋಗಿಗೆ ಅಥವಾ ಅವರ ಸಾವಿನ ನಂತರ ಕಾನೂನಾತ್ಮಕ ವಾರಸುದಾರರಿಗೆ ಬ್ಯಾಂಕ್ ಬೇಡಿಕೆ ಇಟ್ಟಿಲ್ಲ. ಸಾಲದ ಮೊತ್ತವನ್ನು ಗ್ರಾಚ್ಯುಯಿಟಿ ಹಣದಿಂದ ವಸೂಲಿ ಮಾಡಿಕೊಳ್ಳಲು ಬ್ಯಾಂಕ್ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದೆ. ಸಾಲದ ಒಪ್ಪಂದ ನಿಯಮಗಳ ಅನುಸಾರ ಬ್ಯಾಂಕ್ ನಡೆದು ಕೊಳ್ಳಬೇಕಾಗುತ್ತದೆ. ಒಪ್ಪಂದದ ಅನುಸಾರ ಸಾಲಗಾರ ವಿರುದ್ಧ ಎಲ್ಲ ಹಕ್ಕು ಚಲಾಯಿಸಬಹುದು. ಆದರೆ, ಸಾಲದ ಬಾಕಿಯನ್ನು ಗ್ರಾಚ್ಯುಯಿಟಿ ಹಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಮೇಲ್ಮನವಿ ಪ್ರಾಧಿಕಾರದ ಆದೇಶ ಸೂಕ್ತವಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಗ್ರಾಚ್ಯುಯಿಟಿ ಪಾವತಿ ಕಾಯ್ದೆ-1972 ಅಡಿಯಲ್ಲಿ ನಿವೃತ್ತಿ ಸಂದರ್ಭದಲ್ಲಿ ಉದ್ಯೋಗಿಗೆ ಹಣಕಾಸು ಭದ್ರತೆ ಕಲ್ಪಿಸಲು 'ಉದ್ಯೋಗಿ ಕಲ್ಯಾಣ ನಿಧಿ'ಯಡಿ ಗ್ರಾಚ್ಯುಯಿಟಿ ಗೆ ರಕ್ಷಣೆ ಕಲ್ಪಿಸಲಾಗಿರುತ್ತದೆ. ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ಗ್ರಾಚ್ಯುಯಿಟಿ ಬಿಡುಗಡೆಗೆ ಉದ್ಯೋಗಿ ಅರ್ಜಿ ಸಲ್ಲಿಸಿದರೆ, ಉದ್ಯೋಗದಾತ ನಿಗದಿತ ಅವಧಿಯಲ್ಲಿ ಪಾವತಿ ಮಾಡಬೇಕಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಪ್ರಕರಣದ ಹಿನ್ನೆಲೆ: ಡಿ.ಶ್ರೀಮಂತ ಎಂಬುವರು 1975ರಲ್ಲಿ ರಾಷ್ಟ್ರೀಯ ಬ್ಯಾಂಕ್‌ವೊಂದರಲ್ಲಿ ಜವಾನ ಆಗಿ ನೇಮಕಗೊಂಡಿದ್ದು, 1987ರಲ್ಲಿ ಗುಮಾಸ್ತ ಆಗಿ ಬಡ್ತಿ ಪಡೆದಿದ್ದರು. ಸೇವಾವಧಿಯಲ್ಲಿ ಅದೇ ಬ್ಯಾಂಕಿನಿಂದ ಗೃಹ ಸಾಲ ಪಡೆದುಕೊಂಡು ಕಾಲ ಕಾಲಕ್ಕೆ ಪಾವತಿಸುತ್ತಿದ್ದರು.
ಆದರೆ 2005ರಲ್ಲಿ ದುರ್ನಡತೆ ಆರೋಪಕ್ಕೆ ಒಳಗಾಗಿ ವಿಚಾರಣೆ ನಡೆದು, ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ವಿಚಾರಣಾಧಿಕಾರಿ ಶ್ರೀಮಂತ ವಿರುದ್ಧದ ಆರೋಪಗಳು ಸಾಬೀತಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದರು. ನಂತರ ಉದ್ಯೋಗಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಿ ಬ್ಯಾಂಕಿನ ಶಿಸ್ತು ಪ್ರಾಧಿಕಾರ 2006ರ ಜು.27ರಂದು ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಶ್ರೀಮಂತ ಅವರು ಕೈಗಾರಿಕಾ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಮಧ್ಯ ಗ್ರಾಚ್ಯುಯಿಟಿ ಹಣ ಹಣ ಬಿಡುಗಡೆ ಕೋರಿ ಶ್ರೀಮಂತ ಅವರು ಸಲ್ಲಿಸಿದ್ದ ಅರ್ಜಿಯನ್ನು ಬ್ಯಾಂಕ್ ವಜಾಗೊಳಿಸಿತ್ತು. ಹಾಗಾಗಿ ಅವರು ನಿಯಂತ್ರಣಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಶ್ರೀಮಂತ ಅವರು ಸಾವನ್ನಪ್ಪಿದ್ದರು.
ಗೃಹ ಸಾಲ ಬಾಕಿಯಿದ್ದ ಕಾರಣ ಅದಕ್ಕೆ ಗ್ರಾಚ್ಯುಯಿಟಿ ರೂ. 1,29,619 ಹಣನ್ನು ಹೊಂದಾಣಿಕೆ ಮಾಡಲಾಗಿದೆ ಎಂದು ಪ್ರಾಧಿಕಾರಕ್ಕೆ ಬ್ಯಾಂಕ್ ತಿಳಿಸಿತ್ತು. ಆ ಕ್ರಮವನ್ನು ನಿಯಂತ್ರಣ ಪ್ರಾಧಿಕಾರ ಪುರಸ್ಕರಿಸಿತ್ತು. ಇದರಿಂದ ಮೃತ ಶ್ರೀಮಂತ ಅವರ ಕುಟುಂಬದವರು ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಅದು ನಿಯಂತ್ರಣ ಪ್ರಾಧಿಕಾರದ ಆದೇಶವನ್ನು ರದ್ದುಪಡಿಸಿ, ಉದ್ಯೋಗಿಯ ಕುಟುಂಬದವರಿಗೆ ವಾರ್ಷಿಕ ಶೇ.10ರಷ್ಟು ಬಡ್ಡಿದರದಲ್ಲಿ ಗ್ರಾಚ್ಯುಯಿಟಿ ಹಣ ಪಾವತಿಸಲು ಬ್ಯಾಂಕಿಗೆ 2019ರ ಅ.21ರಂದು ನಿರ್ದೇಶಿಸಿತ್ತು. ಅದನ್ನು ಬ್ಯಾಂಕ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇದೀಗ ಬ್ಯಾಂಕಿನ ಕ್ರಮ ರದ್ದುಪಡಿಸಿರುವ ಹೈಕೋರ್ಟ್, ಮೇಲ್ಮನವಿ ಪ್ರಾಧಿಕಾರದ ಆದೇಶ ಪಾಲಿಸಲು ನಿರ್ದೇಶಿಸಿದೆ.
ಇದನ್ನೂ ಓದಿ: ಸಮಾಜದ ಒಂದು ವರ್ಗದವರಿಗೆ ಪ್ರಬುದ್ಧತೆ ಕಡಿಮೆ, ಎಲ್ಲವನ್ನೂ ನಂಬುತ್ತಾರೆ: ಹೈಕೋರ್ಟ್